ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಆನೆಗಳ ವಾಸ್ತವ್ಯ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶಿಸಿ, ಆನೆಗಳ ಜೊತೆ ಅಪಾಯಕಾರಿಯಾಗಿ ರೀಲ್ಸ್ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವತಿ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಅರಮನೆ ಆವರಣದಲ್ಲಿ ಆನೆಗಳು ಹಾಗೂ ಮಾವುತರ ಕುಟುಂಬ ವಾಸ್ತವ್ಯ ಹೂಡಲು ಅರಣ್ಯ ಇಲಾಖೆ ವಿಶೇಷ ವ್ಯವಸ್ಥೆ ಮಾಡಿದ್ದು, ಅಲ್ಲಿಗೆ ಪ್ರವೇಶಿಸಲು ಮುಂಚಿತ ಅನುಮತಿ ಕಡ್ಡಾಯ. ಆದರೆ, ಈ ನಿಯಮವನ್ನು ಉಲ್ಲಂಘಿಸಿದ ಯುವತಿ, ಆನೆಯ ಬಳಿ ಹೋಗಿ ಸೊಂಡಿಲನ್ನು ತಬ್ಬಿಕೊಂಡು ಮುದ್ದಾಡುತ್ತಾ ವಿಡಿಯೋ ತೆಗೆದುಕೊಂಡಿದ್ದಾರೆ. ಈ ದೃಶ್ಯಗಳು ಹೊರಬಂದ ಬಳಿಕ ಅರಣ್ಯ ಇಲಾಖೆಯ ನಿರ್ಲಕ್ಷ್ಯತೆ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಅನಧಿಕೃತವಾಗಿ ಆನೆಯ ಬಳಿ ತೆರಳಿ ರೀಲ್ಸ್ ಮಾಡಿದ ಯುವತಿಯನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು. ಈ ಹಿಂದೆ ಸಹ ಅನುಮತಿ ಇಲ್ಲದೆ ಆನೆಗಳ ಬಳಿ ತೆರಳಿ ಫೋಟೋ ಹಾಗೂ ವಿಡಿಯೋ ತೆಗೆದುಕೊಂಡ ಮೂವರು ವಿರುದ್ಧ ಪ್ರಕರಣ ದಾಖಲಿಸಿ, ತಲಾ ₹1,000 ದಂಡ ವಿಧಿಸಿದ್ದೇವೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಬಿ. ಪ್ರಭುಗೌಡ ಸ್ಪಷ್ಟಪಡಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ