ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ಹಾಗೂ ನಂತರ ಬರುವ ದೀಪಾವಳಿ ಹಬ್ಬದ ರಜೆಗಳ ಪರಿಣಾಮವಾಗಿ, ಬೆಂಗಳೂರಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪುನಾರಂಭದ ದಿನಾಂಕ ಕುರಿತು ಗೊಂದಲ ಕಂಡುಬಂದಿದೆ. ಆದರೆ ಇದೀಗ, ಈ ಕುರಿತು ಸ್ಪಷ್ಟತೆ ಲಭ್ಯವಾಗಿದೆ.
ಸರ್ಕಾರದ ಪ್ರಕಟಣೆಯ ಪ್ರಕಾರ, ಬೆಂಗಳೂರಿನಲ್ಲಿ ಶಾಲೆಗಳು ಅಕ್ಟೋಬರ್ 23 ರಂದು ಪುನಃ ಆರಂಭವಾಗಲಿವೆ. ಈಗೂ ಮುಂಚೆ ಅಕ್ಟೋಬರ್ 18 ರವರೆಗೆ ರಜೆ ಘೋಷಿಸಲಾಗಿತ್ತು. ಆದರೆ, ಕೆಲವು ಜಿಲ್ಲೆಗಳಲ್ಲಿ ಜಾತಿಗಣತಿ ಸಮೀಕ್ಷೆ ವಿಳಂಬವಾಗಿವೆ. ಈ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಶಾಲೆಗಳು ಪುನರಾರಂಭವಾಗಲಿಲ್ಲ.
ಅಕ್ಟೋಬರ್ 20 ಕ್ಕೆ ಬೆಂಗಳೂರು ವ್ಯಾಪ್ತಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದರ ಬೆನ್ನಲ್ಲೇ ಅಕ್ಟೋಬರ್ 21 ಮತ್ತು 22 ರಂದು ದೀಪಾವಳಿ ರಜೆ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ಶಾಲೆಗಳ ಪುನರಾರಂಭವನ್ನು ಅಕ್ಟೋಬರ್ 23ಕ್ಕೆ ಮುಂದೂಡಲಾಗಿದೆ.
ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ರಜೆಯಿಂದಾಗಿ ಕಳೆದುಹೋದ ತರಗತಿಯ ಸಮಯವನ್ನು ಸರಿದೂಗಿಸಲು ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಲು ಒಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಈ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ 1.6 ಲಕ್ಷಕ್ಕೂ ಹೆಚ್ಚು ಸರ್ಕಾರಿ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೇ 6,700 ಸಿಬ್ಬಂದಿಯನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ.
ಸೆಪ್ಟೆಂಬರ್ 22 ರಂದು ಆರಂಭವಾದ ಸಮೀಕ್ಷೆಯನ್ನು ಅಕ್ಟೋಬರ್ 7 ರೊಳಗೆ ಮುಗಿಸಲು ಯೋಜಿಸಲಾಗಿತ್ತು. ಆದರೆ, ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ವಿಳಂಬವಾದ ಕಾರಣ ಮತ್ತೆ 10 ದಿನಗಳ ಕಾಲ ವಿಸ್ತರಣೆ ಮಾಡಲಾಯಿತು. ಆಯೋಗದ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 12ರ ಅಂತ್ಯಕ್ಕೆ ರಾಜ್ಯದ ಅಂದಾಜು 1.87 ಕೋಟಿ ಕುಟುಂಬಗಳ ಪೈಕಿ 1.43 ಕೋಟಿ ಕುಟುಂಬಗಳ ಶೇ. 76.49 ಸಮೀಕ್ಷೆ ಪೂರ್ಣಗೊಂಡಿದೆ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ