ರಾಜ್ಯಾದ್ಯಂತ ನಡೆಯುತ್ತಿರುವ ಜಾತಿ ಜನಗಣತಿ ಕೇವಲ 3 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಮೂರು ಕೋಟಿ ಜನರ ಮಾಹಿತಿ ಹಾಗೂ 80 ಲಕ್ಷ ಮನೆಗಳ ಸರ್ವೇ ಕಾರ್ಯ ಮುಗಿದಿದೆ. ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ದಿನಾಂಕ ವಿಸ್ತರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಮೀಕ್ಷೆಯು ಕೇವಲ ಜಾತಿ ಗಣತಿಗೆ ಸೀಮಿತವಲ್ಲದೆ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿ ಸಿದ್ಧಪಡಿಸುವುದೇ ಉದ್ದೇಶ ಎಂದು ಸಿಎಂ ವಿವರಿಸಿದರು. ಸ್ವಾತಂತ್ರ್ಯಾನಂತರ ಜನರ ಜೀವನಮಟ್ಟ ಹೇಗೆ ಬದಲಾಗಿದೆ ಎಂಬುದರ ಕುರಿತು ಸರ್ಕಾರ ಸಮಗ್ರ ಮಾಹಿತಿ ಪಡೆದು ಮುಂದಿನ ಯೋಜನೆಗಳನ್ನು ರೂಪಿಸಲಿದೆ ಎಂದರು.
ಆದರೆ ಮೂರು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ದಿನಾಂಕವನ್ನು ವಿಸ್ತರಿಸಲಾಗುವುದಾಗಿಯೂ ಕೂಡ ಸ್ಪಷ್ಟಪಡಿಸಿದರು. ನಾಳೆಯಿಂದ ಬೆಂಗಳೂರಿನಲ್ಲಿ ಜಾತಿ ಜನಗಣತಿ ಪ್ರಾರಂಭವಾಗಲಿದ್ದು, ಹಿಂದುಳಿದ ವರ್ಗಗಳ ಆಯೋಗವು ಆಧಾರ್ ಹಾಗೂ ರೇಷನ್ ಕಾರ್ಡ್ ಆಧಾರಿತವಾಗಿ ಮನೆಮನೆಗೆ ತೆರಳಿ ದತ್ತಾಂಶ ಸಂಗ್ರಹಿಸಲಿದೆ.
ಕರ್ನಾಟಕದಾದ್ಯಂತ ಸೆಪ್ಟೆಂಬರ್ 22 ರಿಂದ ಜಾತಿ ಗಣತಿ/ಸಮೀಕ್ಷೆ ನಡೆದಿದೆ. ಇದಕ್ಕೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾತಾಡಿದ್ದಾರೆ. ಜಾತಿ ಜನಗಣತಿ ತೃಪ್ತಿ ತಂದಿದೆ ಎಂದಿದ್ದಾರೆ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರ್. ಅಶೋಕ್ ಅವರ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಅವರಿಗೆ ರೈತರ ವಿಷಯದಲ್ಲಿ ಏನೂ ಗೊತ್ತಿಲ್ಲ. RSS ಬರೆದು ಕೊಡುವುದನ್ನೇ ಓದುತ್ತಾರೆ ಎಂದು ಕಿಡಿಕಾರಿದರು.
ಮೈಸೂರಿನಲ್ಲೇ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ ಹೊಸ ಮನೆಯಲ್ಲಿ ಡಿಸೆಂಬರ್‌ನಲ್ಲಿ ಗೃಹಪ್ರವೇಶ ಮಾಡಲಿದ್ದೇನೆ ಎಂದು ತಿಳಿಸಿದರು. ಯಾರನ್ನೂ ಆಹ್ವಾನಿಸುವುದಿಲ್ಲ. ಕೇವಲ ಕುಟುಂಬಸ್ಥರೊಂದಿಗೆ ಮಾತ್ರ ಗೃಹಪ್ರವೇಶ ನಡೆಯಲಿದೆ. ಮಾಧ್ಯಮವನ್ನೂ ಆಹ್ವಾನಿಸುವುದಿಲ್ಲ ಎಂದರು.
ಈ ಮನೆಯನ್ನ ಮರಿಸ್ವಾಮಿ ಖಾಲಿ ಇಟ್ಟರೆ ಜನರನ್ನ ಭೇಟಿ ಮಾಡಲು ಈ ಮನೆಯನ್ನ ಬಳಸಿಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ