ಜಾತಿ ಗಣತಿ ವರದಿ ಕುರಿತು ರಾಜ್ಯದಾದ್ಯಂತ ದೊಡ್ಡ ನಿರೀಕ್ಷೆ ಇತ್ತು. ಆದರೆ ಇಂದಿನ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ. ಸುದೀರ್ಘ ಚರ್ಚೆಯ ಬಳಿಕವೂ ನಿರ್ಧಾರಕ್ಕೆ ಬರದೆ, ವಿಷಯವನ್ನು ಮುಂದೂಡಲಾಗಿದೆ. ಸಭೆಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಚಿವರು ಏರು ಧ್ವನಿಯಲ್ಲಿ ಮಾತಾಡಿದ್ರು ಎನ್ನುವ ಮಾಹಿತಿ ಹೊರಬಂದಿದೆ.
ಸಭೆ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ 2025ರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ವರದಿ ಕುರಿತು ಚರ್ಚೆ ನಡೆದಿದೆ. ದತ್ತಾಂಶದ ತಾಂತ್ರಿಕ ವಿವರಗಳನ್ನು ಇನ್ನಷ್ಟು ಪರಿಶೀಲನೆ ಮಾಡಬೇಕಾಗಿದೆ. ವಿವಿಧ ಪ್ಯಾರಾಮೀಟರ್ಸ್‌ಗಳನ್ನು ಹೇಗೆ ಅಳವಡಿಸಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ಮುಂದುವರೆದಿದ್ದು, ಅಕ್ಟೋಬರ್ 2ರಂದು ಮತ್ತೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಕಳೆದೊಂದು ವಾರದಿಂದ ಜಾತಿ ಗಣತಿ ವರದಿ ರಾಜ್ಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿತ್ತು. ವರದಿಯ ಸೋರಿಕೆಯಾದ ಅಂಕಿ-ಅಂಶಗಳು ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ಉಂಟುಮಾಡಿದ್ದರೆ, ಶೋಷಿತ ಸಮುದಾಯಗಳು ವರದಿ ಜಾರಿ ಆಗಲೇಬೇಕು ಎಂದು ಒತ್ತಾಯಿಸಿವೆ. ಹೀಗಾಗಿ ಇಂದಿನ ಸಂಪುಟ ಸಭೆಗೆ ವಿಶೇಷ ಮಹತ್ವ ಸಿಕ್ಕಿತ್ತು.
ಸಭೆಯಲ್ಲಿ ದಲಿತ ಸಚಿವರು ಜಾತಿ ಗಣತಿ ಕಾಂಗ್ರೆಸ್ ಘೋಷಣಾ ಪತ್ರಿಕೆಯಲ್ಲಿ ಇದ್ದದ್ದು, ಹಿಂದೆ ಸರಿಯಲು ಆಗುವುದಿಲ್ಲ ಎಂದು ಒತ್ತಾಯಿಸಿದರೆ, ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜಾತಿ ಗಣತಿ ಒಪ್ಪಲಾರೆ ಎಂದು ಘೋಷಿಸಿದರೆ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಧ್ವನಿಗೂ ಬೆಂಬಲಿಸಿದರು.
ಚರ್ಚೆ ಗದ್ದಲದ ನಡುವೆಯೇ ಸಿಎಂ ಸಿದ್ದರಾಮಯ್ಯ, ಜಾತಿ ಗಣತಿ ವಿರೋಧಿಸುವವರು ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ನೀಡುವಂತೆ ಸೂಚಿಸಿದರು. ಯಾವುದೇ ತೀರ್ಮಾನವಿಲ್ಲದೇ ಸಭೆ ಮುಕ್ತಾಯಗೊಂಡಿದ್ದು, ಮುಂದಿನ ವಾರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆ ಸಾಮಾನ್ಯ ಅಜೆಂಡಾದ ಮೇಲೆ ಕೇಂದ್ರೀಕರಿಸಲಿದ್ದು, ಜಾತಿ ಗಣತಿ ವಿಚಾರ ಅಕ್ಟೋಬರ್ 2ರ ಸಭೆಗೆ ಮುಂದೂಡಲಾಗಿದೆ. ಹೀಗಾಗಿ ಮುಂದಿನ ನಿರ್ಧಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




