ಕೆ.ಆರ್.ಎಸ್. ಅಣೆಕಟ್ಟೆ ಬಳಿ ಕಾವೇರಿ ಆರತಿ ಪ್ರಕ್ರಿಯೆ ಕೈಗೊಂಡಿರುವುದು ಕಾನೂನಿಗೆ ಮಾಡುತ್ತಿರುವ ಅಪಮಾನವಾಗಿದೆ. ಅಣೆಕಟ್ಟು ಸುರಕ್ಷತೆ ಕಾಯ್ದೆಗೆ ಭಂಗ ಮಾಡಲಾಗುತ್ತಿದೆ ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಅಣೆಕಟ್ಟೆ ಬಳಿ ಕಾವೇರಿ ಆರತಿ ಮಾಡಬಾರದು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಮಧ್ಯಂತರ ತಡೆಯಾಜ್ಜೆ ಆದೇಶವಿದ್ದರೂ, ಕಾನೂನು ಉಲ್ಲಂಘಿಸಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಲಾಖೆ ಅಧಿಕಾರಿಗಳಿಗೆ ಕಾನೂನು ಅರಿವಿದ್ದರೂ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರ, ದರ್ಪ, ಹಣದ ಮದದಿಂದ ಮಾಡಲಾಗುತ್ತಿರುವ ದ್ರೋಹದ ಕಾರ್ಯ ಖಂಡನೀಯ. ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್. ಅಣೆಕಟ್ಟೆಯನ್ನು ನಾಶ ಮಾಡಲು ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು.
ಮುನ್ನೀರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡು ಯೋಜನೆಗಳನ್ನು ಕೈಗೊಂಡಿದ್ದರೆ, ಹಿನ್ನೀರಿನಲ್ಲಿ ಮಂಡ್ಯ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸೀ ಪ್ಲೇನ್ ಯೋಜನೆ ಮಾಡಲು ಮುಂದಾಗಿದ್ದಾರೆ. ಇವೆಲ್ಲವೂ ಡ್ಯಾಂ ಸುರಕ್ಷತೆಗೆ ಧಕ್ಕೆ ತರುವ ಯೋಜನೆಗಳು. ಇವರಿಬ್ಬರೇ 2016ರಲ್ಲಿ ಡಿಸ್ನಿಲ್ಯಾಂಡ್ ಸ್ಥಾಪಿಸಲು ಮುಂದಾಗಿದ್ದರು. ಆಗಲೂ ರೈತಸಂಘ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಕ್ಕೆ ರದ್ದಾಯಿತು ಎಂದು ಹೇಳಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ