ಕೋಲ್ಕತ್ತಾ: ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನಿಖೆಯಲ್ಲಿ ಆರೋಪಿ ಸಂಜಯ್ ರಾಯ್ ಕ್ರೌರ್ಯ ಬಗೆದಷ್ಟು ಬಯಲಾಗುತ್ತಿದ್ದು, ಆಸ್ಪತ್ರೆಯ ಸಿಸಿಟಿವಿ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಅಧಿಕಾರಿಗಳು ತಾಂತ್ರಿಕ ಸಾಕ್ಷ್ಯ ಮತ್ತು ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಕೃತ್ಯ ನಡೆದ ದಿನ ಆರೋಪಿ ಸಂಜಯ್ ಆಸ್ಪತ್ರೆಯಲ್ಲೇ ಇದ್ದ ಎನ್ನುವುದಕ್ಕೆ ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಅದೇನೆಂದ್ರೆ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಸಂಜಯ್ ಕೊರಳಿನಲ್ಲಿರುವ ಇಯರ್ ಫೋನ್. ಆಗಸ್ಟ್ 8ರ ಮಧ್ಯರಾತ್ರಿ1.03 ಗಂಟೆಗೆ ಆಸ್ಪತ್ರೆಗೆ ಬಂದಿದ್ದ ಆರೋಪಿ ಸಂಜಯ್ ರಾಯ್ ಕುತ್ತಿಗೆಯಲ್ಲಿ ಬ್ಲೂಟೂತ್ ಇಯರ್ ಫೋನ್ ಇರುವುದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.
ಪ್ರಕರಣವನ್ನು ತನಿಖೆ ನಡೆಸುತ್ತಿರುವ ಕೇಂದ್ರಿಯ ತನಿಖಾ ತಂಡದ ಅಧಿಕಾರಿಗಳು ಆರೋಪಿ ಸಂಜಯ್ ರಾಯ್ ಮುಂದೆ ಟೆಕ್ನಿಕಲ್ ಎವಿಡೆನ್ಸ್ಗಳನ್ನ ಇಟ್ಟು ವಿಚಾರಣೆ ನಡೆಸಿದ್ದಾರೆ. ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿರೋ ಆರೋಪಿ ತನಿಖಾಧಿಕಾರಿಗಳಿಗೆ ಘಟನೆಯ ಬಗ್ಗೆ ಇಂಚಿಂಚು ಮಾಹಿತಿಯನ್ನು ಕೊಟ್ಟಿದ್ದಾನೆ.
ಆರೋಪಿ ಸಂಜಯ್ ರಾಯ್ ಕಂಠಪೂರ್ತಿ ಕುಡಿದು ಆಸ್ಪತ್ರೆಗೆ ಬಂದಿದ್ದ ಎಂಬ ಮಾಹಿತಿ ಈಗ ಲಭ್ಯವಾಗಿದೆ. ಕೃತ್ಯ ಎಸಗುವ ಮೊದಲು ಮದ್ಯ ಸೇವಿಸಿದ್ದ ಸಂಜಯ್ ರಾಯ್ ಕೋಲ್ಕತ್ತಾದ ಸೋನಾಗಚಿಯಲ್ಲಿರುವ ರೆಡ್ ಲೈಟ್ ಏರಿಯಾಗೆ ಹೋಗಿದ್ದ. ಈ ಎಲ್ಲಾ ವಿಚಾರಗಳ ಬಗ್ಗೆ ವಿಚಾರಣೆ ವೇಳೆ ಆರೋಪಿ ಸಂಜಯ್ ತಪ್ಪೊಪ್ಪಿಕೊಂಡಿದ್ದಾನೆ.
‘ಹತ್ಯಾ’ಚಾರಿ ಕ್ರೌರ್ಯ ಬಿಚ್ಚಿಟ್ಟ ಸ್ನೇಹಿತರು:
ಪ್ರಕರಣದ ಆರೋಪಿ ಸಂಜಯ್ ರಾಯ್ ಸ್ನೇಹಿತರನ್ನು ಸಹ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ಮದ್ಯ ಸೇವಿಸಿದ ನಂತರ ಸಂಜಯ್ ತೋಳದಂತೆ ವರ್ತಿಸುತ್ತಿದ್ದ. ಮದ್ಯಪಾನ ಮಾಡುವುದು, ಹುಡುಗಿಯರನ್ನು ಚುಡಾಯಿಸುವುದು ಆತನ ಅಭ್ಯಾಸವಾಗಿತ್ತು. ಆರೋಪಿ ತನ್ನ ಸ್ನೇಹಿತರ ಸಹೋದರಿಯರನ್ನೂ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಅಲ್ಲದೆ ಪ್ರತಿನಿತ್ಯ ಕಂಠಪೂರ್ತಿ ಕುಡಿದು ಮನೆಗೆ ಬರುತ್ತಿದ್ದ ಸಂಜಯ್ ರಾಯ್ ತನ್ನ ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ಸಾಲದಕ್ಕೆ ನೆರೆಹೊರೆಯ ಮನೆಗಳಲ್ಲಿ ವಾಸವಿರುವ ಮಹಿಳೆಯರಿಗೂ ಸಂಜಯ್ ಕಿರುಕುಳ ಕೊಡುತ್ತಿದ್ದ. ಆತ ಒಳ್ಳೆಯ ವ್ಯಕ್ತಿಯಾಗಿರಲಿಲ್ಲ. ಆತ ಹೆಣ್ಣು ಮಕ್ಕಳನ್ನ ಕೆಟ್ಟದಾಗಿ ನೋಡುತ್ತಿದ್ದ ಎಂದು ಅಕ್ಕಪಕ್ಕದ ಮನೆಗಳ ಮಹಿಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.