Saturday, July 27, 2024

Latest Posts

ಸಿ.ಡಿ ಮಾಡಿಕೊಂಡಿದ್ದು ಜೆಡಿಎಸ್‌ನವರು, ಬಹಿರಂಗಗೊಳಿಸಿದ್ದು ಬಿಜೆಪಿಯವರು: ಶಾಸಕ ಹೆಚ್.ಸಿ ಬಾಲಕೃಷ್ಣ

- Advertisement -

Ramanagara News: “ಸಿ.ಡಿ ಮಾಡಿಕೊಂಡಿದ್ದು ಜೆಡಿಎಸ್ ನವರು, ಅದನ್ನು ಬಹಿರಂಗಗೊಳಿಸಿದ್ದು ಬಿಜೆಪಿಯವರು, ಆದರೆ ಕಾಂಗ್ರೆಸ್ ನವರನ್ನು ವಿಲನ್ ಮಾಡುತ್ತಿರುವುದೇಕೆ? ಇದ್ಯಾವ ನ್ಯಾಯ?” ಎಂದು ಶಾಸಕ ಬಾಲಕೃಷ್ಣ ಅವರು ಪ್ರಶ್ನಿಸಿದ್ದಾರೆ.

ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬಾಲಕೃಷ್ಣ ಅವರು ಉತ್ತರಿಸಿದ್ದು ಹೀಗೆ:

“ಪ್ರಜ್ವಲ್ ಗೆ ಈ ರೀತಿ ಮಾಡುವಂತೆ ನಾವು ಹೇಳಿದ್ದೆವಾ? ಡಿ.ಕೆ ಶಿವಕುಮಾರ್ ಅವರು ಫೋನ್ ಮಾಡಿ ಪ್ರಜ್ವಲ್ ಗೆ ಸಿ.ಡಿ ಮಾಡಲು ಹೇಳಿದ್ದರಾ? ಅಥವಾ ನಾವು ಅವರ ರೂಮ್ ನಲ್ಲಿ ನಿಂತು ಸಿ.ಡಿ ಮಾಡಿದ್ದೇವಾ? ಕುಮಾರಸ್ವಾಮಿ ಅವರೇನೋ ತಲೆಕೆಟ್ಟವರಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಹೊರತಾಗಿ ಬೇರೆ ಯಾರೂ ಕಾಣುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ನಿದ್ದೆಯಲ್ಲೂ ಡಿ.ಕೆ. ಶಿವಕುಮಾರ್ ಹೆಸರು ಕನವರಿಸುತ್ತಾರೆ” ಎಂದರು.

ಒಕ್ಕಲಿಗ ನಾಯಕತ್ವವನ್ನು ಮೋದಿ ಪಾದಕ್ಕೆ ಅಡವಿಟ್ಟರು:

ಒಕ್ಕಲಿಗ ನಾಯಕತ್ವಕ್ಕಾಗಿ ಕುಮಾರಸ್ವಾಮಿ ಅವರು ಈ ರೀತಿ ಆರೋಪ ಮಾಡುತ್ತಿದ್ದಾರಾ ಎಂದು ಕೇಳಿದಾಗ, “ಒಕ್ಕಲಿಗರ ನಾಯಕತ್ವ ಈ ಹಿಂದೆ ಜನತಾ ದಳದಲ್ಲಿತ್ತು. ಈಗ ಅದು ಛಿದ್ರವಾಗಿದೆ. ಎಲ್ಲಾ ಪಕ್ಷದಲ್ಲೂ ಒಕ್ಕಲಿಗರು ಗುರುತಿಸಿಕೊಳ್ಳುತ್ತಿದ್ದಾರೆ. ಒಕ್ಕಲಿಗರ ಪ್ರಾಬಲ್ಯ ನಾಯಕತ್ವ ಈಗ ಕಾಂಗ್ರೆಸ್ ಪಕ್ಷದಲ್ಲಿದೆ. ಜೆಡಿಎಸ್ ನವರು ಒಕ್ಕಲಿಗರ ನಾಯಕತ್ವವನ್ನು ಮೋದಿ ಪಾದಕ್ಕೆ ಅಡವಿಟ್ಟಿದ್ದಾರೆ. ಬಿಜೆಪಿಯಲ್ಲಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡುತ್ತಾರಾ? ಮಾಡಲಿ ನೋಡೋಣ. ಕುಮಾರಸ್ವಾಮಿ ಅವರು ಇಷ್ಟು ದಿನ ಎರಡೂ ಕಡೆ ಬ್ಯಾಲೆನ್ಸ್ ಮಾಡಿ ಸಿಎಂ ಆಗುತ್ತಿದ್ದರು. ಈಗ ಬಿಜೆಪಿಯಲ್ಲಿ ಅದೆಲ್ಲಾ ನಡೆಯುವುದಿಲ್ಲ. ಬಿಜೆಪಿಯವರು ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಎಂದು ಗೊತ್ತಿರುವ ವಿಚಾರ.

ಶಿವರಾಮೇಗೌಡ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ, ಡಿಕೆಶಿ ಹೆಸರು ಪ್ರಸ್ತಾಪವೇಕೆ?

ಡಿ.ಕೆ. ಶಿವಕುಮಾರ್ ಅವರು ಎಲ್ಲಿ ನಾಯಕರಾಗುತ್ತಾರೋ. ಒಕ್ಕಲಿಗರು ಎಲ್ಲಿ ಅವರ ಪರ ವಾಲುತ್ತಾರೋ, ಎಲ್ಲಿ ತನ್ನ ನಾಯಕತ್ವಕ್ಕೆ ಕುತ್ತು ಬರುತ್ತದೋ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರು ಪದೇ ಪದೆ ಶಿವಕುಮಾರ್ ಅವರ ಹೆಸರು ಹೇಳುತ್ತಿದ್ದಾರೆ. ಶಿವರಾಮೇಗೌಡ ಅವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ. ಅಲ್ಲಿ ಶಿವಕುಮಾರ್ ಅವರ ಹೆಸರು ಪ್ರಸ್ತಾಪ ಮಾಡುವುದೇಕೆ? ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ಪ್ರತಿ ಮಾತಿಗೂ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಕರಣ ಮಾಡಿರುವುದು ಡಿ.ಕೆ. ಶಿವಕುಮಾರ್ ಅವರೇ?

ಫೋಟೋಗೋ ಬೆಂಕಿ ಹಚ್ಚಿ, ಚಪ್ಪಲಿಯಲ್ಲಿ ಹೊಡೆಯೋಕೆ ನಮಗೂ ಬರುತ್ತೆ:

ಶಿವರಾಮೇಗೌಡರು ತಮ್ಮ ತೆ**ಲಿಗೆ ಏನೇನೋ ಮಾಡಿಕೊಂಡರೆ, ಅದಕ್ಕೆ ಡಿ.ಕೆ. ಶಿವಕುಮಾರ್ ಅವರ ಹೆಸರು ಹೇಳುವುದೇಕೆ? ಜೆಡಿಎಸ್ ನಾಯಕರು ಶಿವಕುಮಾರ್ ಅವರ ಭಾವಚಿತ್ರ ಸುಡುವುದನ್ನು ನೋಡುತ್ತಿದ್ದೇವೆ. ನಾವು ತಾಳ್ಮೆಯಿಂದ ಇದ್ದೇವೆ. ನಾವು ಮನಸ್ಸು ಮಾಡಿದರೆ ಎಲ್ಲರ ಭಾವಚಿತ್ರ ಸುಡಬಹುದು. ಯಾರು ತಪ್ಪು ಮಾಡಿದ್ದಾರೆ ಅವರ ಫೋಟೋ ಸುಡಲಿ. ಇದೇ ರೀತಿ ಮುಂದುವರಿದರೆ ನಾವು ಉತ್ತರ ನೀಡುತ್ತೇವೆ. ಕಾಂಗ್ರೆಸ್ ನವರು ಬಳೆತೊಟ್ಟುಕೊಂಡು ಕೂತಿಲ್ಲ. ನಾವು ಏನು ಮಾಡಬೇಕೋ ಮಾಡಲು ಸಿದ್ಧವಿದ್ದೇವೆ.

ಶಿವಕುಮಾರ್ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದಂತೆ ನಾವು ಕುಮಾರಸ್ವಾಮಿ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆಯಬಹುದಲ್ಲವೇ? ಅದು ದೊಡ್ಡತನವೇ? ಅದನ್ನು ಮಾಡಲು ಅವರ ಶಿಷ್ಯರಿಗೆ ಹೇಳಿಕೊಡುತ್ತಾರಾ? ಅವರ ಫೋಟೋಗೆ ಹೊಡೆಯಲು ನಮಗೆ ಬರುವುದಿಲ್ಲವೇ? ಪ್ರಕರಣದಲ್ಲಿ ಎಸ್ಐಟಿ ತನಿಖೆ ಮಾಡುತ್ತಿದ್ದು, ವರದಿ ಬರುತ್ತದೆ. ನಂತರ ನ್ಯಾಯಾಲಯವಿದೆ. ಅವರ ಹೋರಾಟ ನ್ಯಾಯಾಲಯದಲ್ಲಿ ಮಾಡಲಿ. ಅದನ್ನು ಬಿಟ್ಟು ಶಿವಕುಮಾರ್ ಅವರ ಮೇಲೆ ಗೂಬೆ ಕೂರಿಸೋದು ಯಾಕೆ.

ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ, ತಂದೆಗೆ ತಕ್ಕ ಮಗ ಆದ:

ತನ್ನ ಮಗ, ತನ್ನ ಮೊಮ್ಮಗ ಸಿಡಿ ಮಾಡಿರುವ ಬಗ್ಗೆ ಗೊತ್ತಿದ್ದರೂ ಅವರಿಗೆ ಪುತ್ರ ಹಾಗೂ ಮೊಮ್ಮಗನ ವ್ಯಾಮೋಹ ಯಾಕೆ ಬೇಕಿತ್ತು? ಅವನಿಗೆ ಯಾಕೆ ಟಿಕೆಟ್ ಕೊಟ್ಟರು. ಟಿಕೆಟ್ ಕೊಡದಿದ್ದರೆ ಇದ್ಯಾವುದೂ ಆಚೆ ಬರುತ್ತಿರಲಿಲ್ಲ. ಈ ಬಗ್ಗೆ ಅಮಿತ್ ಶಾ ಅವರೇ ಹೇಳಿ, ಟಿಕೆಟ್ ನೀಡಬೇಡಿ ಎಂದು ಹೇಳಿದ್ದಾರೆ. ಆದರೂ ದೇವೇಗೌಡರಿಗೆ ಆ ರೀತಿ ವ್ಯಾಮೋಹ ಯಾಕೆ? ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಬಹುದಿತ್ತಲ್ಲವೇ? ಅದನ್ನು ಯಾರೂ ಕೇಳುವುದಿಲ್ಲ. ಮಾಧ್ಯಮಗಳು ಕಾಂಗ್ರೆಸ್ ನವರನ್ನೇ ವಿಲನ್ ಮಾಡಲು ಹೊರಟಿವೆ. ಸಿ.ಡಿ ತಪ್ಪು ಮಾಡಿರುವುದು ಜೆಡಿಎಸ್ ನವರು, ಅದನ್ನು ಆಚೆ ಬಿಟ್ಟವರು ಬಿಜೆಪಿಯವರು. ವಿಲನ್ ಆಗುತ್ತಿರುವವರು ಕಾಂಗ್ರೆಸ್ ನವರು. ಇದ್ಯಾವ ನ್ಯಾಯ? ನೀವು ಸಿ.ಡಿ ಮಾಡಿ ಕೊಡಿ ಎಂದು ನಾವು ಸಿ.ಡಿ ಫ್ಯಾಕ್ಟರಿ ಇಟ್ಟಿದ್ದೇವಾ? ಮಾಜಿ ಮುಖ್ಯಮಂತ್ರಿಗಳು ಅವರ ಗೌರವಕ್ಕೆ ತಕ್ಕಂತೆ ಮಾತನಾಡಲು ಕಲಿಯಲು ಹೇಳಿ. ಇನ್ನೂ ಚಿಲ್ಲರೆ ಹುಡುಗರಂತೆ ಮಾತನಾಡುವುದನ್ನು ನಿಲ್ಲಿಸಲಿ. ಎಲ್ಲಾ ವಿಚಾರದಲ್ಲೂ ಮೂಗು ತೂರಿಸಲು ಬರುತ್ತಾರೆ. ನಾನು ದಾರಿತಪ್ಪಿದ ಮಗ. ನನಗೆ ನನ್ನ ಶ್ರೀಮತಿಯವರು ಎಚ್ಚರಿಸಿದರು ಎಂದು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ನೂಲಿನಂತೆ ಸೀರೆಯಲ್ಲವೇ? ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ. ತಂದೆಗೆ ತಕ್ಕ ಮಗನಾದ. ತತನಿಗೆ ತಕ್ಕ ಮೊಮ್ಮಗ ಆಗಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ. ತಂದೆಗೆ ತಕ್ಕ ಮಗ ಆಗಿರುವುದರಿಂದ ಇವೆಲ್ಲಾ ಆಚೆ ಬರುತ್ತಿವೆ” ಎಂದರು.

ಸರ್ಕಾರ ಒಂದು ವರ್ಷದ ಸಾಧನೆ ಶೂನ್ಯ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳು ಏನಾದರೂ ಹೇಳಲಿ. ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಮಾಡಿದ್ದೇವೆ. ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಇನ್ನು ನನ್ನ ಕ್ಷೇತ್ರದಲ್ಲಿ ಏನೆಲ್ಲಾ ಮಾಡಿದ್ದೇವೆ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದೇವೆ. ಬಿಜೆಪಿಯವರಿಂದ ಹೊಗಳಿಕೆ ನಿರೀಕ್ಷಿಸಲು ಸಾಧ್ಯವೇ? ಅವರು ವಿರೋಧ ಪಕ್ಷದ ಕೆಲಸ ಮಾಡುತ್ತಿದ್ದಾರೆ ಮಾಡಲಿ.

ಸರ್ಕಾರ ಐಸಿಯುನಲ್ಲಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಕಾನೂನು ಸುವ್ಯವಸ್ಥೆ ಹಾಳಾಗಲು ಕುಮಾರಸ್ವಾಮಿ ಅವರೇ ಮುಖ್ಯ ಕಾರಣ” ಎಂದರು.

ಕುಮಾರಸ್ವಾಮಿ ಅವರು ಯಾವಾಗ ಸತ್ಯ ಹೇಳಿದ್ದಾರೆ:

ಫೋನ್ ಟ್ಯಾಪಿಂಗ್ ವಿಚಾರವಾಗಿ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಎಂದಾದರೂ ಸತ್ಯ ಹೇಳಿರುವುದನ್ನು ನೋಡಿದ್ದೀರಾ? ಅವರು ಕೇವಲ ಸುಳ್ಳು ಹೇಳುತ್ತಾರೆ. ಸತ್ಯ ಹೇಳುವುದಿಲ್ಲ. ನಮ್ಮ ವಿರುದ್ಧ ಸರ್ಕಾರ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಈ ರೀತಿ ಮಾಡಬಹುದು ಎಂದು ಅವರೇ ಊಹೆ ಮಾಡಿಕೊಳ್ಳುತ್ತಾರೆ. ಕುಮಾರಸ್ವಾಮಿ ಅವರು ಸತ್ಯ ಮಾತನಾಡಿರುವ ಉದಾಹರಣೆ ಇದ್ದರೆ ಕೊಡಿ” ಎಂದು ತಿಳಿಸಿದರು.

ಪ್ರಜ್ವಲ್ ಅವರ ಪೆನ್ ಡ್ರೈವ್ ಪ್ರಕರಣದಲ್ಲಿ ದೇವರಾಜೇಗೌಡ ಅವರು ಡಿ.ಕೆ. ಶಿವಕುಮಾರ್ ಹಾಗೂ ನಾಲ್ವರು ಸಚಿವರ ವಿರುದ್ಧ ಆರೋಪ ಮಾಡಿರುವ ಬಗ್ಗೆ ಕೇಳಿದಾಗ, “ದೇವರಾಜೇಗೌಡ ಮೊದಲಿನಿಂದಲೂ ದೇವೇಗೌಡರ ಕುಟುಂಬದ ವಿರುದ್ಧವೇ ಇದ್ದಾರೆ. ಈಗ ನಮ್ಮ ವಿರುದ್ಧ ನಿಂತಿದ್ದಾರೆ. ಇದೆಲ್ಲವೂ ಬಿಜೆಪಿಯವರು ಆಡಿಸುತ್ತಿರುವ ಆಟ. ಬಿಜೆಪಿಯವರು ಕೀ ಕೊಟ್ಟಂತೆ ಆತ ಕುಣಿಯುತ್ತಾನೆ” ಎಂದು ತಿಳಿಸಿದರು.

ಪ್ರಕರಣ ಸಿಬಿಐಗೆ ವಹಿಸಬೇಕು ಎಂಬ ಆಗ್ರಹದ ಬಗ್ಗೆ ಕೇಳಿದಾಗ, “ಪ್ರಕರಣದ ತನಿಖೆಯನ್ನು ಸಿಬಿಐಗೆ ಯಾಕೆ ನೀಡಬೇಕು? ಬಿಡಿಸಿಸಿ ಬ್ಯಾಂಕ್ ಹಗರಣವನ್ನು ಸಿಬಿಐಗೆ ವಹಿಸಿ ಎಷ್ಟು ವರ್ಷವಾಯಿತು? 35 ವರ್ಷವಾದರೂ ಯಾವ ವರದಿ ಬಂದಿದೆ? ಎಸ್ಐಟಿಯಲ್ಲಿ ತನಿಖೆಯಾಗಲಿ. ಅಲ್ಲಿ ಸಮಾಧಾನವಾಗದಿದ್ದರೆ ನಂತರ ಆಲೋಚಿಸೋಣ. ಎಸ್ಐಟಿ ವರದಿ ಬರುವ ಮುನ್ನವೇ ಸಿಬಿಐಗೆ ವಹಿಸಿ ಎನ್ನುತ್ತಿರುವುದೇಕೆ? ಇದರಿಂದ ಪಾರಾಗಲು ಪ್ರಯತ್ನಿಸುತ್ತಿದ್ದೀರಾ?” ಎಂದು ತಿಳಿಸಿದರು.

Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು

National News: ಎಮಿರೇಟ್ಸ್ ವಿಮಾನ ಡಿಕ್ಕಿ: 35ಕ್ಕೂ ಹೆಚ್ಚು ರಾಜಹಂಸ ಪಕ್ಷಿಗಳ ಸಾವು..?

ಮಮತಾ ಬ್ಯಾನರ್ಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಭ್ಯರ್ಥಿಗೆ 1 ದಿನದ ಪ್ರಚಾರ ನಿಷೇಧ

- Advertisement -

Latest Posts

Don't Miss