ನವದೆಹಲಿ: ಅತೀ ಶೀಘ್ರದಲ್ಲಿಯೇ ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5 ಜಿ ತಂತ್ರಜ್ಞಾನ ಸೇವೆ ಲಭ್ಯವಾಗಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಂಪುಟ ಸಭೆಯಲ್ಲಿ ಜೂನ್.26 ಕ್ಕೆ 5 ಜಿ ಸ್ಪೆಕ್ಟ್ರಮ್ ಹರಾಜು ನಡೆಸುವುದಕ್ಕೆ ಸಮ್ಮತಿ ನೀಡಿದ್ದು, ಅದಕ್ಕೆ ಅನುಸಾರವಾಗಿ ಪ್ರಕ್ರಿಯೆಗಳು ನಡೆಯಲಿವೆ.
ಸದ್ಯಕ್ಕಿರುವ 4 ಜಿ ತಂತ್ರಜ್ಞಾನಕ್ಕಿಂತ, 5 ಜಿ ತಂತ್ರಜ್ಞಾನವು ಹತ್ತು ಪಟ್ಟು ಹೆಚ್ಚು ವೇಗವನ್ನು ಅಂತರ್ಜಾಲ ಬಳಕೆದಾರರಿಗೆ ನೀಡಲಿದೆ.
ಬೆಂಗಳೂರಿನ ಐಐಎಸ್ ಸಿ ಸೇರಿದಂತೆ 8 ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಲ್ಲಿ ಅದರ ಪರೀಕ್ಷೆ ಮಾಡಲಾಗಿದೆ . ವಿಶೇಷತೆ ಏನೆಂದರೆ, ಬಿಡ್ ಗೆದ್ದ ಕಂಪನಿಗೆ 20 ಸಮಾನ ಕಂತುಗಳಲ್ಲಿ ಸ್ಪೆಕ್ಟ್ರಮ್ ಮೊತ್ತ ಪಾವತಿ ಮಾಡಲು ಅವಕಾಶ ಕಲ್ಪಿಸಿದೆ.
5 ಜಿ ಸ್ಪೆಕ್ಟ್ರಮ್ ಹರಾಜಾದ ಬಳಿಕ ಬೆಂಗಳೂರಿಗೆ ಅದರ ಸೇವೆ ಯಾವಾಗ ಬರುತ್ತದೋ ಎಂದು ಬೆಂಗಳೂರಿನ ಅಂತರ್ಜಾಲ ಬಳಕೆದಾರರು ಬೇಸರಪಟ್ಟುಕೊಳ್ಳುವಂತಿಲ್ಲ. ಏಕೆಂದರೆ 5 ಜಿ ಅನುಷ್ಠಾನದ ಮೊದಲ ಹಂತದಲ್ಲೇ ಬೆಂಗಳೂರಿಗೆ ಈ ಯೋಜನೆ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ಮಾತ್ರವಲ್ಲದೆ, ಅಹಮದಾಬಾದ್, ಚಂಡೀಗಢ, ಚೆನ್ನೈ, ನವದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, , ಮುಂಬೈ, ಪುಣೆಗಳಲ್ಲಿಯೂ ಈ ಸೌಲಭ್ಯ ಸಿಗಲಿದೆ.