ಕನ್ನಡ ಚಿತ್ರರಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆಲುಗು ಚಿತ್ರರಂಗದ ವಿರುದ್ಧ ಗುಡುಗಿದ್ದಾರೆ. ತೆಲುಗು ಮಂದಿಯ ಸೃಜನಪಕ್ಷಪಾತದ ವಿರುದ್ಧ ದಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳಿಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ನೆಲದಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಲಾಗಿದೆ. ಇದು ಡಿಬಾಸ್ ದರ್ಶನ್ ಸಿಟ್ಟಿಗೆ ಕಾರಣವಾಗಿದೆ.
ಯಸ್, ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮಾರ್ಚ್ 11ರಂದು ತೆರೆಗಪ್ಪಳಿಸ್ತಿದೆ. ಅದೇ ದಿನ ತೆಲುಗಿ ಮೂರು ಸಿನಿಮಾಗಳು ರಿಲೀಸ್ ಆಗ್ತಿವೆ. ಹೀಗಾಗಿ ರಾಬರ್ಟ್ ಸಿನಿಮಾದ ಬಿಡುಗಡೆಗೆ ತೆಲುಗಿನಲ್ಲಿ ತಡೆ ನೀಡಲಾಗಿದೆಯಂತೆ.
ತೆಲುಗಿನ ಯಾವುದೇ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದ, ಅದೇ ಸಮಯದಲ್ಲಿ ಕನ್ನಡದ ಯಾವುದಾದರು ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸಿದರೆ ಅದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ತೆಲುಗಿನ ಸಣ್ಣ ಬಜೆಟ್ ಸಿನಿಮಾಗಳ ಸಿನಿಮಾ ಬಿಡುಗಡೆ ಇದ್ದರೂ ಸಹ ಕನ್ನಡದ ಸಿನಿಮಾಗಳನ್ನು ತಡೆ ಹಿಡಿಯಲಾಗುತ್ತಿದೆ. ತೆಲುಗು ಡಬ್ ವರ್ಷನ್ಗಳಿಗೆ ಸಹ ಅಡ್ಡಿಪಡಿಸಲಾಗುತ್ತಿದೆ.
ಇತರ ಭಾಷೆ ಸಿನಿಮಾಗಳು ಬಿಡುಗಡೆ ಆದ ಕೆಲವು ವಾರಗಳ ನಂತರ ಕರ್ನಾಟಕದಲ್ಲಿ ಬಿಡುಗಡೆ ಆಗಬೇಕು ಎಂಬ ನಿಯಮ ಕೆಲ ವರ್ಷಗಳ ಹಿಂದಿತ್ತು. ನಂತರ ಈ ನಿಯಮ ನಿಂತುಹೋಗಿದ್ದು, ತೆಲುಗು ಸೇರಿದಂತೆ ಇತರ ಭಾಷೆ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆ ಆಗಲು ಯಾವುದೇ ನಿಯಮಾವಳಿಗಳನ್ನು ಪಾಲಿಸಲಾಗುತ್ತಿಲ್ಲ. ಅವರಿಗೆಲ್ಲ ನಿಯಮಗಳು ನಮಗೆ ಯಾಕೆ ಅನ್ವಯ..? ತೆಲುಗು ರಾಜ್ಯದಲ್ಲಿ ಕನ್ನಡ ಸಿನಿಮಾಗಳ ರಿಲೀಸ್ ಗೆ ತಕರಾರು ಯಾಕೆ..? ಅನ್ನೋದು ದಚ್ಚು ವಾದ. ತೆಲುಗು ರಾಜ್ಯದ ಈ ನಡೆ ವಿರುದ್ಧ ಡಿಬಾಸ್ ದರ್ಶನ್ ಇಂದು ಬೆಳಗ್ಗೆ 11 ಗಂಟೆಗೆ ಫಿಲ್ಮಂ ಛೇಂಬರ್ ಗೆ ದೂರು ನೀಡಲಿದ್ದಾರಂತೆ.




