ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ನಟ. ಇವರು ಹೆಚ್ಚಾಗಿ ಮಾಸ್ ಕ್ರೇಜ್ ಇರುವ ನಟ ಎಂದರೆ ತಪ್ಪಾಗುವುದಿಲ್ಲ. ಕನ್ನಡದಲ್ಲಿ ನಟ ದರ್ಶನ್ ಮಾಡಿರುವ ಬಹುತೇಕ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ನಿರ್ಮಾಪಕರು ಹಣಗಳಿಸಬೇಕೆಂದರೆ ದರ್ಶನ್ ಅವರಿಗೆ ಸಿನಿಮಾ ಮಾಡಬೇಕು ಎಂಬ ಮಾತು ಗಾಂಧಿನಗರದಲ್ಲಿ ಇತ್ತು.
ಆದರೆ ಈಗ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಮಾತು, ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಹವಾ. ಇದೀಗ ಈ ಸಾಲಿಗೆ ದರ್ಶನ್ ಕೂಡ ಸೇರಿಕೊಳ್ಳುತ್ತಿದ್ದಾರೆ. ದರ್ಶನ್ ಕೂಡ ಪ್ಯಾನ್ ಇಂಡಿಯಾ ಸಿನಿಮಾವನ್ನು ಮಾಡುವತ್ತ ಗಮನಹರಿಸಿದ್ದಾರೆ. ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಇದೀಗ ಪ್ಯಾನ್ ಇಂಡಿಯಾ ಸಿನಿಮಾವಾಗುತ್ತಿದೆ.
ಈಗಾಗಲೇ ಕುರುಕ್ಷೇತ್ರ ಹಾಗೂ ರಾಬರ್ಟ್ ಚಿತ್ರಗಳು ತೆಲುಗಿನಲ್ಲಿ ತೆರೆಕಂಡಿದೆ. ಅದಲ್ಲದೆ ರಾಬರ್ಟ್ ಸಿನಿಮಾ ಉತ್ತಮ ಕಲೆಕ್ಷನ್ ಕೂಡ ಮಾಡಿತ್ತು. ಮತ್ತು ಕುರುಕ್ಷೇತ್ರ ಸಿನಿಮಾ ಕನ್ನಡದಲ್ಲಿ ಉತ್ತಮ ಗಳಿಕೆ ಕಂಡಿತ್ತು. ಕನ್ನಡದಲ್ಲಿ ಕುರುಕ್ಷೇತ್ರ ಸಿನಿಮಾ ರಿಲೀಸ್ ಆದ ನಂತರ ಸ್ವಲ್ಪ ದಿನಗಳ ಬಳಿಕೆ ತೆಲುಗಿನಲ್ಲಿ ತೆರೆಕಂಡು ಕುರುಕ್ಷೇತ್ರ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೆ ತೆಲುಗು ಪ್ರೇಕ್ಷಕರ ಗಮನವನ್ನು ಈ ಸಿನಿಮಾ ಸೆಳೆದಿತ್ತು.
ಇನ್ನು ಬಾಲಿವುಡ್ ವಿಚಾರಕ್ಕೆ ಬಂದರೆ ಚಾಲೆಂಜಿಂಗ್ ಸ್ಟಾರ್ ಹಿಂದಿ ಪ್ರೇಕ್ಷಕರಿಗೆ ಹೊಸಬರೇನಲ್ಲ. ದರ್ಶನ್ ಅವರು ಅಭಿನಯಿಸಿರುವ ಹಲವು ಚಿತ್ರಗಳನ್ನು ಹಿಂದಿ ಪ್ರೇಕ್ಷಕರು ಈಗಾಗಲೇ ನೋಡಿದ್ದಾರೆ. ಹಾಗಂತ ದರ್ಶನ್ ಹಿಂದಿಯಲ್ಲಿ ಯಾವುದೇ ಸಿನಿಮಾವನ್ನು ಕೂಡ ಮಾಡಿಲ್ಲ. ಅದರ ಬದಲು ಕನ್ನಡದಲ್ಲಿ ಇರುವ ಚಿತ್ರಗಳನ್ನು ಹಿಂದಿ ಭಾಷೆಗೆ ಡಬ್ ಮಾಡಿ ಕಿರುತೆರೆ ಮತ್ತು ಯುಟ್ಯೂಬ್‌ನಲ್ಲಿ ರಿಲೀಸ್ ಮಾಡಲಾಗಿದೆ.ಹಾಗಾಗಿ ಈ ಸಿನಿಮಾಗಳ ಮೂಲಕ ದರ್ಶನ್ ಉತ್ತರ ಭಾರತದ ಅಭಿಮಾನಿಗಳಿಗೂ ಸಹ ಹತ್ತಿರವಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಾಸ್ ಹೀರೋ ಎಂದರೆ ನೆನಪಾಗೋದು ದರ್ಶನ್. ಅವರು ಹೇಳಿ, ಕೇಳಿ ಮಾಸ್ ಹೀರೋ. ದರ್ಶನ್ ಮಾಸ್ ಅಪೀಲ್‌ಗೆ ಸಾಕಷ್ಟು ಅಭಿಮಾನಿಗಳು ಈಗಾಗಲೇ ಇದ್ದಾರೆ. ಇವರು ಒಮ್ಮೆ ಮಾಸ್ ಅವತಾರದಲ್ಲಿ ಬಾಲಿವುಡ್ ಅಖಾಡಕ್ಕೆ ಕಾಲಿಟ್ಟರೆ, ಹಿಟ್ ಆಗುವ ಸಾಧ್ಯತೆ ಇದೆ. ಹಾಗಾಗಿ ಇವರ ಮುಂದಿನ ಚಿತ್ರ ‘ಕ್ರಾಂತಿ’ ಸಿನಿಮಾ ಕನ್ನಡ ಭಾಷೆಯಲ್ಲಿ ಅಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಕೂಡ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ರಿಲೀಸ್ ಬಳಿಕ ಚಾಲೆಂಜಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ನಿಲ್ಲುತ್ತಾರೋ ಇಲ್ಲವಾ ಎನ್ನುವ ಬಗ್ಗೆ ಸ್ಪಷ್ಟನೆ ಸಿಗುತ್ತದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ