ಮದ್ದೂರಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶದ ಬೆನ್ನಲ್ಲೇ ಮೈಸೂರಿಲ್ಲಿ ಧರ್ಮ ದಂಗಲ್ ಜೋರಾಗಿದೆ. ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆಗೆ ಮುಂದಾಗಿದ್ದ, ಬಿಜೆಪಿಗರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಸರಾ ಉದ್ಘಾಟಕರಾಗಿ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ, ಭಾರೀ ವಿರೋಧ ವ್ಯಕ್ತಪಡಿಸಲಾಗ್ತಿದೆ.
ಸೆಪ್ಟೆಂಬರ್ 9ರ ಬೆಳ್ಳಂಬೆಳಗ್ಗೆಯೇ ಪಾದಯಾತ್ರೆ ಮಾಡಲು ಮುಂದಾಗಿದ್ರು. ಮಾಜಿ ಶಾಸಕ ಎಲ್. ನಾಗೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಸ್ಥಳೀಯ ಮುಖಂಡ ಶುಶ್ರುತ್ ಗೌಡ ಸೇರಿ ನೇತೃತ್ವದಲ್ಲಿ, ಜಿಲ್ಲಾ ಮುಖಂಡರು ಎಂಟ್ರಿ ಕೊಟ್ಟಿದ್ರು. ಈ ವೇಳೆ ಕುರುಬರಹಳ್ಳಿ ಸರ್ಕಲ್ ಬಳಿ ಪೊಲೀಸರು ತಡೆದಿದ್ದಾರೆ. ಎಷ್ಟೇ ಮನವೊಲಿಕೆ ಮಾಡಿದ್ರೂ ಪ್ರಯೋಜನವಾಗಿಲ್ಲ. ಬಿಜೆಪಿ ನಾಯಕರು, ಮುಖಂಡರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಸೇರಿದಂತೆ, ಹಲವು ಮುಖಂಡರು, ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಹೋಗುವ ಎಲ್ಲಾ ರಸ್ತೆಗಳಲ್ಲೂ ನಾಕ ಬಂದಿ ಹಾಕಲಾಗಿದೆ. ಚಾಮುಂಡಿ ಬೆಟ್ಟದ ಸುತ್ತಲೂ ಭಾರೀ ಭದ್ರತೆ ವಹಿಸಲಾಗಿದೆ. ಹಿಂದೂ ಜಾಗರಣಾ ವೇದಿಕೆ ಕೂಡ ಚಾಮುಂಡಿ ಚಲೋ ಪಾದಯಾತ್ರೆಗೆ ಕರೆ ನೀಡಿದ್ದಾರೆ. ಇನ್ನೊಂದೆಡೆ ಬಾನು ಮುಷ್ತಾಕ್ ಆಯ್ಕೆ ಸಮರ್ಥಿಸಿಕೊಂಡು, ಪಾದಯಾತ್ರೆ ನಡೆಸಲು ದಲಿತ ಸಂಘಟನೆಗಳು ಕರೆ ನೀಡಿವೆ. ಈ ಎರಡೂ ಪಾದಯಾತ್ರೆಗಳಿಗೆ ಪೊಲೀಸರು ಅನುಮತಿ ನೀಡಿಲ್ಲ.

