ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರಿವು ಸಿಕ್ಕಿದ್ದು, ಬೇನಾಮಿ ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದ್ಯಾ ಎಂಬ ಪ್ರಶ್ನೆ ಎದ್ದಿದೆ.
ಆಪ್ತ ಮಹಾಂತೇಶ್‌ನಿಂದಲೇ ಈ ಹತ್ಯೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ಆಧಾರದಲ್ಲಿ ಮಹಾಂತೇಶ್‌ನನ್ನು ಗುರುತಿಸಲಾಗಿದ್ದು, ಈಗ ಮಹಾಂತೇಶ್ ಪತ್ನಿ ವನಜಾಕ್ಷಿಯನ್ನು ಬಂಧಿಸಲಾಗಿದೆ.
ಗೋಕುಲ ರೋಡ್ ಠಾಣೆ ಪೊಲೀಸರು ವನಜಾಕ್ಷಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯಾಹ್ನ 12:30 ರ ವೇಳೆಗೆ ಗುರೂಜಿ ಅವರನ್ನು ಹತ್ಯೆ ಮಾಡಿದ ಬಳಿಕ ಮಹಾಂತೇಶ್ ಸ್ನೇಹಿತ ಮಂಜುನಾಥನೊಂದಿಗೆ ಪರಾರಿಯಾಗಿದ್ದಾನೆ.
ವನಜಾಕ್ಷಿ ಸರಳವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದಾಳೆ. ಈ ಹಿಂದೆ ಗುರೂಜಿ ವನಜಾಕ್ಷಿ ಹೆಸರಿನಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ನಿರ್ಮಿಸಿದ್ದರು. ಈ ಬೇನಾಮಿ ಆಸ್ತಿಯನ್ನು ಗುರೂಜಿ ವಾಪಸ್ ಕೇಳಿದ್ದರು. ಈ ವಿಚಾರ ಅಲ್ಲದೇ ಹಣಕಾಸಿನ ವಿಚಾರವಾಗಿ ಕೆಲ ದಿನಗಳಿಂದ ಮಹಾಂತೇಶ್ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇಂದು ಇದು ವಿಕೋಪಕ್ಕೆ ತಿರುಗಿ ಗುರೂಜಿ ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಪೊಲೀಸರು ಈಗಾಗಲೇ ಹಂತಕರ ಬೇಟೆಗೆ ಬಲಿ ಬಿಸಿದ್ದಾರೆ.