ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಕೆಲವು ಜಿಲ್ಲೆಗಳಲ್ಲಿ ಇನ್ನೂ ಭಾರಿ ಮಳೆಯ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ದಿನಗಳಲ್ಲಿ ರಾಜ್ಯದ ಬಹುಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೇಗರಲಿದೆ ಮಳೆ? ಏನು ಹೇಳತ್ತೇ ಹವಾಮಾನ ಇಲಾಖೆ.
ದಕ್ಷಿಣ ಒಳನಾಡಿನ 3 ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಇವುಗಳಲ್ಲಿ ಜುಲೈ 31ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗಾಳಿ ಪ್ರತಿ ಗಂಟೆಗೆ 50-60 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ, ಗಾಳಿಯ ವೇಗ 40-50 ಕಿಮೀ ಇರಬಹುದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು ನಗರ – ಮುಂದಿನ ನಾಲ್ಕು ದಿನಗಳ ವಾತಾವರಣ, ಜುಲೈ 31ರಿಂದ ಆಗಸ್ಟ್ 3ರ ವರೆಗೆ, ಮೋಡಕವಿದ ವಾತಾವರಣ ಇರಲಿದೆ. ಆಗಸ್ಟ್ 2 ಮತ್ತು 3ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ತಾಪಮಾನದ ಬಗ್ಗೆ ನೋಡೋದಾದ್ರೆ ಗರಿಷ್ಠ ತಾಪಮಾನ: 28 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ: 20 ಡಿಗ್ರಿಯಷ್ಟು ಇರಲಿದೆ.
ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಮೈಸೂರು, ಮಡಿಕೇರಿ, ಬೆಂಗಳೂರು, ಶಿವಮೊಗ್ಗ… ಎಲ್ಲಾ ಕಡೆಗಳಲ್ಲಿ ಮುಂದಿನ ಒಂದು ವಾರ ಸಾಧಾರಣ ಮಳೆಯಿರುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿನ ಒತ್ತಡದ ಬದಲಾವಣೆಗಳಿಂದಾಗಿ ಹವಾಮಾನದಲ್ಲಿ ಈ ಬದಲಾವಣೆಗಳು ಕಂಡುಬರುತ್ತಿವೆ.
ವರದಿ : ಲಾವಣ್ಯ ಅನಿಗೋಳ