ರಾಜ್ಯ ರಾಜಕೀಯದಲ್ಲಿ ಹೊಸ ಹೊಸ ಗದ್ದಲಗಳು, ವಿಷಯಗಳು ಚರ್ಚೆ ಆಗ್ತಾನೆ ಇವೆ. ಅದೇ ರೀತಿ ಈಗ ಸಚಿವ ಸತೀಶ ಜಾರಕಿಹೊಳಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ರಾಜ್ಯದ ಸಚಿವ ಸಂಪುಟ ಪುನರ್‌ರಚನೆ ಅಂತಿಮ ಹಂತದಲ್ಲಿದೆ. ಹೊಸ ಮುಖಗಳು ಸೇರ್ಪಡೆಯಾಗಬಹುದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭಾನುವಾರ ಹೇಳಿದರು.

ಬೆಳಗಾವಿ : ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಯಾರಿಗೆ ಸಚಿವ ಸ್ಥಾನ ದೊರಕುವುದು ಎಂಬುದು ಕಾದು ನೋಡಬೇಕಾದ ವಿಚಾರವಾಗಿದೆ ಎಂದಿದ್ದಾರೆ. ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂಬ ಸಚಿವ ಕೃಷ್ಣ ಬೈರೇಗೌಡ ಹೇಳಿಕೆಗೆ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ನಿರ್ಧಾರವನ್ನು ಎಲ್ಲರೂ ಪಾಲನೆ ಮಾಡಬೇಕು. ಸಂಪುಟದಿಂದ ಕೈ ಬಿಟ್ಟವರು ಪಕ್ಷದ ಕೆಲಸಕ್ಕೆ ಹೋಗಲೇಬೇಕಾಗುತ್ತದೆ.
ಮಂತ್ರಿ ಆಗಿ ಉಳಿದವರು ಪಕ್ಷದ ಕೆಲಸ ಮಾಡಬೇಕಾಗುತ್ತದೆ. ಸಂಪುಟ ಪುನರ್‌ರಚನೆ ಬಗ್ಗೆ ನಿರ್ಧಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನೇತೃತ್ವದಲ್ಲಿದೆ. ಬೆಂಗಳೂರು ಮತ್ತು ದೆಹಲಿ ಮಟ್ಟದಲ್ಲಿ ಚರ್ಚೆ ಬಳಿಕ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯಿಂದ ಯಾರಿಗೆ ಸಚಿವ ಸ್ಥಾನ ಸಿಗಬಹುದೆಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ನಮ್ಮಲ್ಲಿ ನಾಲ್ಕು, ಐದು ಬಾರಿ ಶಾಸಕರಾದ ಹಿರಿಯರು ಬಹಳಷ್ಟು ಜನರಿದ್ದಾರೆ. ನಾವು ಇವರೇ ಆಗುತ್ತಾರೆ ಎಂದು ಹೇಳುವುದು ಕಷ್ಟ ಆಗುತ್ತದೆ. ಎಲ್ಲರೂ ಬೇಡಿಕೆ ಇಡುತ್ತಾರೆ. ಅಂತಿಮವಾಗಿ ಯಾರಿಗೆ ಲಕ್ಷ್ಮೀ ಒಲಿಯುತ್ತಾಳೆ ಅನ್ನೋದನ್ನ ಕಾದುನೋಡಬೇಕಿದೆ ಎಂದಿದ್ದಾರೆ.
ಜೊತೆಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯ ಕುರಿತು ಸತೀಶ ಜಾರಕಿಹೊಳಿ ಹೇಳಿದ್ದಾರೆ. ಅದು ಅಹಿಂದ ವಿಷಯಕ್ಕೆ ಸಂಬಂಧ ಹೊಂದಿದೆ. ಸಿಎಂ, ಡಿಸಿಎಂ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಇದಕ್ಕೆ ಸಂಬಂಧವಿಲ್ಲ. ಅದರ ಮೇಲೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ, ರಾಜ್ಯದ ಸಂಪುಟ ಪುನರ್‌ರಚನೆ ಸಮೀಪದಲ್ಲಿದ್ದು, ಹಳಬರು ಹೊರಬರುವಂತೆಯೇ ಹೊಸ ಮುಖಗಳು ಆಡಳಿತದಲ್ಲಿ ಸಕ್ರಿಯರಾಗಲಿದ್ದಾರೆ ಎಂಬ ಭಾವನೆ ಹುಟ್ಟಿದೆ.
ವರದಿ : ಲಾವಣ್ಯ ಅನಿಗೋಳ

