ಚನ್ನರಾಯಪಟ್ಟಣ: ಸರ್ಕಾರಿ ಗೋದಾಮಿನಿಂದಲೇ ಅಕ್ರಮವಾಗಿ ಪಡಿತರ ಸಾಗಾಣೆ ಮಾಡುವ ವೇಳೆ ಪೊಲೀಸರು ದಾಳಿ ಮಾಡಿರುವ ಘಟನೆ ಚನ್ನರಾಯಪಟ್ಟಣದ ಮೈಸೂರು ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿರುವ ಗೋಡಾನ್‌ನಲ್ಲಿ ನಡೆದಿದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋಡಾನ್‌ನಿಂದ ರಾತ್ರಿ ಮೂರು ಗಂಟೆ ಸಮಯದಲ್ಲಿ ಅಕ್ರಮವಾಗಿ ಗೋಧಿ ಸಾಗಾಣೆ ಮಾಡಲು ಲಾರಿಗೆ ಗೋಧಿ ತುಂಬಲಾಗುತ್ತಿತ್ತು.350 ಚೀಲ ಗೋಧಿಯನ್ನು ಲಾರಿಗೆ ತುಂಬಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ.
ಅಕ್ರಮ ಗೋಧಿ ಸಾಗಾಣೆಯಲ್ಲಿ ಗೋಡಾನ್ ಮ್ಯಾನೇಜರ್ ಲಿಂಗರಾಜು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಅಕ್ರಮವಾಗಿ ಗೋಧಿ ಸಾಗಾಣೆ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಈ ಬಗ್ಗೆ ಮಾಹಿತಿಯೇ ಇಲ್ಲಾ ಎನ್ನುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಿಪಿಐ ವಂಸತ್‌ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳೆದ ಏಳು ತಿಂಗಳ ಹಿಂದೆ ಅಕ್ರಮ ಪಡಿತರ ಸಾಗಾಣೆ ವಿಚಾರದಲ್ಲಿ ಲಿಂಗರಾಜು ಸಸ್ಪೆಂಡ್ ಆಗಿದ್ದರು. ನಂತರ ಅವರನ್ನು ಬೇಲೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿತ್ತು.
ಕೆಲವೇ ದಿನಗಳಲ್ಲಿ ಲಿಂಗರಾಜು ಶಿವಮೊಗ್ಗದಿಂದ ಚನ್ನರಾಯಪಟ್ಟಣಕ್ಕೆ ವರ್ಗಾವಣೆಗೊಂಡಿದ್ದರು. ಇದೀಗ ಅಕ್ರಮ ಪಡಿತರ ಸಾಗಾಣೆ ಮಾಡುವಾಗ ಪೊಲೀಸರು ದಾಳಿ ಮಾಡಿದ್ದು ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.




