ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ಶಿಕ್ಷಕರನ್ನು ಅವೈಜ್ಞಾನಿಕ ರೀತಿಯಲ್ಲಿ ನಿಯೋಜನೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಆರೋಪಿಸಿದ್ದಾರೆ.
ಪುಟ್ಟಣ್ಣ ಅವರ ಹೇಳಿಕೆ ಪ್ರಕಾರ, ಸಮೀಕ್ಷೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 5 ವಲಯಗಳಲ್ಲಿ ನಡೆಯುತ್ತಿದೆ. ಶಿಕ್ಷಕರಿಗೆ ತಮ್ಮ ನಿವಾಸ ಅಥವಾ ಕೆಲಸದ ಸ್ಥಳದಿಂದ 30 ರಿಂದ 40 ಕಿಲೋ ಮೀಟರ್ ದೂರದಲ್ಲಿರುವ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಲು ಆದೇಶ ನೀಡಲಾಗಿದೆ.
ಇದು ಶಿಕ್ಷಕರಿಗೆ ಅನವಶ್ಯಕ ತೊಂದರೆ ಉಂಟುಮಾಡುತ್ತಿದೆ. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಮತ್ತು ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರಿಗೆ ಇದು ದೊಡ್ಡ ಸಮಸ್ಯೆ ಎಂದು ಅವರು ಹೇಳಿದ್ದಾರೆ. ಇದರ ವಿರುದ್ಧವಾಗಿ ಹಲವರು ಮಲ್ಲೇಶ್ವರದಲ್ಲಿರುವ ನಗರ ಪಾಲಿಕೆಯ ಜಂಟಿ ಆಯುಕ್ತರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಮೀಕ್ಷೆಯ ತರಬೇತಿ ಸಂದರ್ಭದಲ್ಲಿ, ಶಿಕ್ಷಕರಿಗೆ ತಮ್ಮ ಮನೆ ಅಥವಾ ಶಾಲೆ ಬಳಿ ಇರುವ ಹತ್ತು ವಾರ್ಡ್‌ಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿತ್ತು. ಆದರೆ, ಆಯ್ದ ವಾರ್ಡ್‌ಗಳಲ್ಲಿ ನಿಯೋಜಿಸುವ ಬದಲು ದೂರದ ವಾರ್ಡ್‌ಗಳಲ್ಲಿ ಕರ್ತವ್ಯ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ನಿಯೋಜನೆ ಆದೇಶವನ್ನು ಹಿಂಪಡೆಯಬೇಕು. ಮರು ನಿಯೋಜನೆಗೆ ಆದೇಶ ಹೊರಡಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರನ್ನು ಪುಟ್ಟಣ್ಣ ಆಗ್ರಹಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ