ಸೆಕೆಂಡ್ ಇನ್ನಿಂಗ್ಸ್‌ಗೆ ಸಜ್ಜಾದ ಮೋಹಕತಾರೆ ರಮ್ಯಾ !

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವಾಗಲೇ, ಅವರ ಬಗ್ಗೆ ಇರುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ವರ್ಷಗಳ ಹಿಂದೆ ಅಭಿ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ರಮ್ಯಾ, ಒಂದು ದಶಕದವರೆಗೆ ಕನ್ನಡದ ನಂ.1 ನಟಿಯ ಸ್ಥಾನವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಮೋಹಕತಾರೆ ಅಂತ ಕರೆಸಿಕೊಳ್ಳುವ ರಮ್ಯಾ, ಸಿನಿಮಾರಂಗ ಮತ್ತು ರಾಜಕೀಯ ಎರಡರಿಂದಲೂ ದೂರ ಉಳಿದಿದ್ದರೂ, ಜನಪ್ರಿಯತೆ ಮಾತ್ರ ಒಂದು ಕ್ಷಣವೂ ಕಡಿಮೆಯಾಗಿರಲಿಲ್ಲ.

ಅಭಿಮಾನಿಗಳ ದೊಡ್ಡ ಪ್ರಶ್ನೆ ಎಂದರೆ ರಮ್ಯಾ ಸೆಕೆಂಡ್ ಇನ್ನಿಂಗ್ಸ್ ಯಾವಾಗ? ಈ ಪ್ರಶ್ನೆಗೆ ಹಲವಾರು ವರ್ಷಗಳಿಂದ ಸ್ಪಷ್ಟ ಉತ್ತರ ಯಾರಿಗೂ ಸಿಗಲಿಲ್ಲ. ಕೆಲ ಸಿನಿಮಾಗಳಲ್ಲಿ ಹೆಸರು ಕೇಳಿಬಂದರೂ, ಕೆಲವು ಯೋಜನೆಗಳು ಆರಂಭವೇ ಆಗದೆ ನಿಂತವು, ಕೆಲವು ಮಧ್ಯದಲ್ಲೇ ರದ್ದಾದವು. ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಚಿತ್ರಕ್ಕೂ ಹಾಜರಾದರೂ, ನಂತರ ಆ ಸಿನಿಮಾ ಕೈ ತಪ್ಪಿತು. ಇದರಿಂದ ಅಭಿಮಾನಿಗಳು ಇನ್ನೂ ನಿರೀಕ್ಷೆಯಲ್ಲೇ ಉಳಿದಿದ್ದರು.

ಆದರೆ ಈ ಬಾರಿ ರಮ್ಯಾ ತಾವು ನೇರವಾಗಿ ಮಾತನಾಡಿ, ಮನಸಾರೆ ಕೆಲಸ ಮಾಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಕಳೆದ ತಿಂಗಳಲ್ಲೇ ಸುಮಾರು 40 ಕಥೆಗಳನ್ನು ಕೇಳಿ, ಅವುಗಳಲ್ಲಿ ಒಂದನ್ನು ವಿಶೇಷವಾಗಿ ಮನಸ್ಸಿಗೆ ಹತ್ತಿದೆಯೆಂದು ಹೇಳಿದ್ದಾರೆ. ಆ ಕಥೆಗೆ ಬಣ್ಣ ಹಚ್ಚಲು ಸಕತ್ ಆತ್ಮವಿಶ್ವಾಸದ ಜೊತೆ ರಮ್ಯಾ ತಯಾರಾಗುತ್ತಿದ್ದಾರೆ. ಇದು ಈ ಹೊತ್ತಿಗೆ ರಮ್ಯಾ ಅಭಿಮಾನಿಗಳಿಗಿರುವ ಅತ್ಯಂತ ದೊಡ್ಡ ಗುಡ್ ನ್ಯೂಸ್.

ಇದರ ಜೊತೆಗೆ ಮತ್ತೊಂದು ಸಂತೋಷಕರ ಸಂಗತಿ ಏನೆಂದರೆ, ಹಲವು ವರ್ಷಗಳ ಹಿಂದೆ ರಮ್ಯಾ–ಉಪೇಂದ್ರ ಜೋಡಿ ನಟಿಸಿದ್ದ “ರಕ್ತಕಾಶ್ಮೀರ” ಚಿತ್ರ ಈಗ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಚಿತ್ರಕ್ಕೂ ಹೊಸ ಕ್ರೇಜ್ ಶುರುವಾಗಿದೆ. ಮತ್ತೊಂದೆಡೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಹೊಸ ಸ್ಕ್ರಿಪ್ಟ್ ಕೇಳಲು ರಮ್ಯಾ ಸಿದ್ದರಾಗಿದ್ದಾರೆ ಎನ್ನುವುದು ಮತ್ತಷ್ಟು ಕುತೂಹಲ ಹುಟ್ಟಿಸಿದೆ. ರಮ್ಯಾ ಸಿನಿಮಾ ಲೋಕಕ್ಕೆ ಪುನಃ ಮರಳುವ ದಾರಿ ಈಗ ಸ್ಪಷ್ಟವಾಗುತ್ತಿದೆ.

ಹುಟ್ಟುಹಬ್ಬದ ಸಮಯದಲ್ಲೇ ಅಭಿಮಾನಿಗಳಿಗೆ ಈ ಡಬಲ್ ಖುಷಿ ಕೊಟ್ಟಿರುವ ರಮ್ಯಾ “ತಮಗೆ ಸಂಬಂಧಿಸಿದ ವಿವಾದಗಳನ್ನೂ ಪರ Mature ಆಗಿ ಉತ್ತರಿಸಿದ್ದಾರೆ. ದರ್ಶನ್ ಫ್ಯಾನ್ಸ್ ಜೊತೆ ನಡೆದ ಗಲಾಟೆಯನ್ನು ಮರೆಯುತ್ತಿದ್ದೇನೆ, ಕ್ಷಮಿಸಿದ್ದೇನೆ ಎಂದು ಹೇಳಿದ್ದಾರೆ. ಒಟ್ಟಾರೆ, ಮೋಹಕತಾರೆ ಮತ್ತೆ ಚಂದನವನದಲ್ಲಿ ಮಿಂಚಲು ಸಜ್ಜಾಗಿದ್ದಾರೆ… ಮತ್ತು ಅವರ ಸೆಕೆಂಡ್ ಇನ್ನಿಂಗ್ಸ್‌ಗೆ ಕಾದು ಕುಳಿತಿರುವ ಫ್ಯಾನ್ಸ್ ಈಗ ಸಂಭ್ರಮದ ಹೊಳೆಲ್ಲಿದ್ದಾರೆ…..

ವರದಿ : ಗಾಯತ್ರಿ ಗುಬ್ಬಿ

About The Author