Sunday, July 6, 2025

Latest Posts

Chhattisgarh Operation : ನಕ್ಸಲರ ಕಳ್ಳನೋಟು ಮುದ್ರಣ.. ಪೊಲೀಸರ ದಾಳಿ

- Advertisement -

ರಾಂಚಿ: ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲೆಂದು ಛತ್ತೀಸ್‌ಗಢದಲ್ಲಿ ನಕ್ಸಲರು ಮುದ್ರಿಸುತ್ತಿದ್ದ ನಕಲಿ ನೋಟುಗಳ ಜಾಲವನ್ನು ಭದ್ರತಾಪಡೆಗಳು ಭೇದಿಸಿವೆ.
೩ ದಶಕದಿಂದ ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊಂದಿರುವ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮೊದಲ ಬಾರಿಗೆ ನಕ್ಸಲರಿಗೆ ಸೇರಿದ ನಕಲಿ ನೋಟುಗಳನ್ನು ಮತ್ತು ಅವುಗಳನ್ನು ಮುದ್ರಿಸಲು ಬಳಸಿದ ಉಪಕರಣಗಳನ್ನು ವಶಪಡಿಸಿಕೊಂಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನಕ್ಸಲರು ಬಹುಕಾಲದಿಂದ ಬಸ್ತಾರ್ ಪ್ರದೇಶದ ಆಂತರಿಕ ಪ್ರದೇಶಗಳ ವಾರದ ಮಾರುಕಟ್ಟೆಗಳಲ್ಲಿ ನಕಲಿ ನೋಟುಗಳನ್ನು ಬಳಸುತ್ತಿದ್ದರು ಮತ್ತು ಅಮಾಯಕ ಆದಿವಾಸಿಗಳನ್ನು ವಂಚಿಸುತ್ತಿದ್ದರು. ನಕ್ಸಲರು ಈ ಕ್ರಮದಿಂದ ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಜಿ ಚೌಹಾಣ್ ಹೇಳಿದ್ದಾರೆ. ಜಿಲ್ಲೆಯ ಕೊರಾಜಗುಡ ಗ್ರಾಮದ ಬಳಿಯ ಅರಣ್ಯದ ಗುಡ್ಡದ ಮೇಲೆ ಶನಿವಾರ ಸಂಜೆ ವಿವಿಧ ಪಡೆಗಳ ಭದ್ರತಾ ಸಿಬ್ಬಂದಿಯ ಜಂಟಿ ತಂಡ ಶೋಧ ಕರ‍್ಯಾಚರಣೆ ನಡೆಸಿದಾಗ ನಕಲಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕೊರಾಜಾಗುಡದ ಮೈಲಾಸೂರಿನಲ್ಲಿ ನಕ್ಸಲರು ನಕಲಿ ನೋಟು ಮುದ್ರಣದಲ್ಲಿ ತೊಡಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಕೇಂದ್ರ ಮೀಸಲು ಪೊಲೀಸ್ ಪಡೆಯ 50ನೇ ಬೆಟಾಲಿಯನ್, ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್‌ಜಿ), ಬಸ್ತಾರ್ ಫೈರ್ಸ ಮತ್ತು ಜಿಲ್ಲಾ ಪಡೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಭದ್ರತಾಪಡೆಗಳ ಉಪಸ್ಥಿತಿಯ ಬಗ್ಗೆ ತಿಳಿಯುತ್ತಿದ್ದಂತೆಯೇ ನಕ್ಸಲರು ತಮ್ಮೆಲ್ಲಾ ವಸ್ತುಗಳನ್ನು ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಶೋಧ ನಡೆಸಿದಾಗ 50, 100, 200 ಮತ್ತು 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು, ಬಣ್ಣದ ಮುದ್ರಣ ಯಂತ್ರ, ಕಪ್ಪು ಬಿಳುಪು ಪ್ರಿಂಟರ್, ಇನ್ವರ್ಟರ್ ಯಂತ್ರ, 200ಬಾಟಲಿಗಳು ಪತ್ತೆಯಾಗಿವೆ. ಶಾಯಿ, ಪ್ರಿಂಟರ್ ಯಂತ್ರದ ನಾಲ್ಕು ಕರ‍್ಟ್ರಿಡ್ಜ್‌ಗಳು, 9ಪ್ರಿಂಟರ್ ರೋಲರ್‌ಗಳ ಆರು ವೈರ್‌ಲೆಸ್ ಸೆಟ್‌ಗಳು, ಅದರ ಚಾರ್ಜರ್ಸ್ ಮತ್ತು ಬ್ಯಾಟರಿಗಳು ಸಿಕ್ಕಿವೆ. ಎರಡು ಮೂತಿ ಲೋಡಿಂಗ್ ಬಂದೂಕುಗಳು, ಅಪಾರ ಪ್ರಮಾಣದ ಸ್ಫೋಟಕಗಳು, ಇತರ ವಸ್ತುಗಳು ಮತ್ತು ನಕ್ಸಲ್ ಸಮವಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್.ಪಿ ಕಿರಣ್ ಚೌವಾಣ್ ಹೇಳಿದ್ದಾರೆ. ಒತ್ತಡದಲ್ಲಿ ಮತ್ತು ಹಣದ ಕೊರತೆಯಿಂದಾಗಿ, ನಕ್ಸಲರು ಆ ಪ್ರದೇಶದ ವಾರದ ಮಾರುಕಟ್ಟೆಗಳಲ್ಲಿ ವಿವಿಧ ವಸ್ತುಗಳನ್ನು ಖರೀದಿಸಲು ನಕಲಿ ನೋಟುಗಳನ್ನು ಬಳಸಿ ಸ್ಥಳೀಯ ಬುಡಕಟ್ಟು ಮಾರಾಟಗಾರರನ್ನು ವಂಚಿಸಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.

- Advertisement -

Latest Posts

Don't Miss