ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮದೇ ಸರ್ಕಾರ ಆಡಳಿತದಲ್ಲಿರುವಾಗಲೇ ಪಕ್ಷದ ಅಧ್ಯಕ್ಷರು ಅಸಮಾಧಾನದಿಂದ ಪತ್ರ, ಇದೀಗ ಸರ್ಕಾರದ ಆಡಳಿತದ ಮೇಲೆ ಅನುಮಾನ ಮೂಡಿಸುವಂತಾಗಿದೆ. ಅಲ್ಲದೆ ಸಾಮಾಜಿಕ ನ್ಯಾಯದ ಬಗ್ಗೆ ಪ್ರತಿಪಾದಿಸುವ, ಹಿಂದುಳಿದ ವರ್ಗಗಳ ಏಳ್ಗೆಯ ಕುರಿತು ಧ್ವನಿ ಎತ್ತುವ ಸಿದ್ದರಾಮಯ್ಯ ಸರ್ಕಾರದಲ್ಲಿ ಈ ವರ್ಗಗಳ ಸ್ಥಿತಿಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಪ್ರಮುಖವಾಗಿ ಎಸ್ಸಿ ಹಾಗೂ ಎಸ್ಟಿ ನೌಕರರ ಮುಂಬಡ್ತಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಈ ಕುರಿತು ಗಮನಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಸೂಚಿಸಿದ್ದಾರೆ.
ಇನ್ನೂ ಎಐಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಅವರಿಗೆ ಎಸ್‌ಎಸ್‌ಟಿ ಸಮುದಾಯದ ನೌಕರರ ಹಿತ ಕಾಯುವಂತೆ ಕೆಲವು ಕಟ್ಟುನಿಟ್ಟಿನ ಸಲಹೆಗಳನ್ನು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಬರೆದಿರುವ ಪತ್ರದಲ್ಲಿನ ಅಂಶಗಳನ್ನು ಗಮನಿಸುವುದಾದರೆ..
ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ. ಎಸ್.ಟಿ. ನೌಕರರ ಸಂಘದವರು ಎಸ್.ಸಿ.ಎಸ್.ಟಿ ನೌಕರರಿಗೆ ಮುಂಬಡ್ತಿಯನ್ನು ನೀಡುವಲ್ಲಿ ರೋಸ್ಟರ್ ಬಿಂದುವನ್ನು ಸರ್ಕಾರದ ಆದೇಶದ ಪ್ರಕಾರ ನಿಗದಿಪಡಿಸಲಾಗಿದೆ. ಆದರೂ ಅದನ್ನು ಕಟುನಿಟ್ಟಾಗಿ ಪಾಲನೆ ಮಾಡಬೇಕೆಂಬ ನಿರ್ದೇಶನವಿದೆ. ಅಲ್ಲಿನ ಕೆಲವು ಇಲಾಖೆಗಳ ಅಧಿಕಾರಿಗಳು ಇದನ್ನು ಪಾಲನೆ ಮಾಡದಿರುವ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ಕೆಲವು ಪ್ರಮುಖ ಅಂಶಗಳ ಜೊತೆಗೆ, ಈ ವಿಚಾರವಾಗಿ ನಿಮಗೂ ಕೂಡ ಬರೆದಿರುವ ಪತ್ರದ ಪ್ರತಿಯನ್ನು ಸಂಘದ ಅಧ್ಯಕ್ಷರು ನನ್ನ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ ಇದರ ಜೊತೆ ಲಗತ್ತಿಸಿರುವ ಪತ್ರಿಕೆಯಲ್ಲಿ ಬಂದಿರುವ ವಿವರಗಳನ್ನು ಹಾಗೂ ಸಂಘದವರು ನಿಮಗೆ ಈಗಾಗಲೇ ನೀಡಿರುವ ಪತ್ರವನ್ನು ಸ್ವತಃ ಅವಲೋಕಿಸುವುದರ ಜೊತೆಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಸರ್ಕಾರವೇ ಹೊರಡಿಸಿರುವ ಅದೇಶ ಹಾಗೂ ಸುತ್ತೋಲೆಗಳಲ್ಲಿ ತಿಳಿಸಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸ್ಪಷ್ಟ ಆದೇಶವನ್ನು ನೀಡುವುದು ಸೂಕ್ತ. ಇಲ್ಲದಿದ್ದರೆ ಅಧಿಕಾರಿಗಳ ಮಟ್ಟದಲ್ಲಿ ಅಸಮಧಾನ ಉಂಟಾಗಿ ಸರ್ಕಾರದ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಲು ಕಷ್ಟವಾಗುತ್ತದೆ ಎಂದು ಖರ್ಗೆ ಅವರು ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.