500ನೇ ಕೋಟಿಯ ಶಕ್ತಿ ಟಿಕೆಟ್ ವಿತರಿಸಿ ಸಿದ್ದು ಸರ್ಕಾರದ ಹೊಸ ಮೈಲಿಗಲ್ಲು! : ಇದುವರೆಗೂ ಪ್ರಯಾಣಿಸಿದ ಮಹಿಳೆಯರೆಷ್ಟು? ಖರ್ಚಾದ ಹಣವೆಷ್ಟು?

ಬೆಂಗಳೂರು : ರಾಜ್ಯದಲ್ಲಿ ಕಳೆದ 2023 ಜೂನ್‌ 11 ರಂದು ಜಾರಿಗೆ ಬಂದಿರುವ ಶಕ್ತಿ ಯೋಜನೆಯು ಕಳೆದ 25 ತಿಂಗಳುಗಳಿಂದ ನಿರಂತರವಾಗಿ ಚಾಲ್ತಿಯಲ್ಲಿದೆ. ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯುತ್ತಿರುವ ಗ್ಯಾರಂಟಿ ಯೋಜನೆ ಇದಾಗಿದೆ. ಆದರೆ ಇದೀಗ ಈ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸಂಖ್ಯೆ 500 ಕೋಟಿ ದಾಟಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಮಹಿಳೆಯರಿಗೆ ಟಿಕೆಟ್‌ ವಿತರಣೆ ಮಾಡಿದರು. ಈ ಮೂಲಕ ಯೋಜನೆಯ ಯಶಸ್ಸನ್ನು ಸಂಭ್ರಮಿಸಿದ್ದಾರೆ.

ಇನ್ನೂ 500 ನೇ ಕೋಟಿಯ ಶಕ್ತಿ ಯೋಜನೆಯ‌ ಬಸ್ ಟಿಕೆಟ್ ಪಡೆದ ಮಹಿಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ್ದಾರೆ. ಇದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಯೋಜನೆಯಾಗಿದೆ. ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರ ಸಂಖ್ಯೆ 500 ಕೋಟಿ ಗಡಿ ದಾಟಿದೆ. ಒಟ್ಟಾರೆಯಾಗಿ ಈ ಉಚಿತ ಪ್ರಯಾಣಕ್ಕೆ ಇದುವರೆಗೂ 12,669 ಕೋಟಿ ರೂಪಾಯಿ ವೆಚ್ಚವಾಗಿರುವುದು ಗಮನಾರ್ಹ.

ಅಲ್ಲದೆ ಶಕ್ತಿ ಯೋಜನೆಗೂ‌ ಮೊದಲು 21,164 ಟ್ರಿಪ್​ಗಳಿದ್ದವು, ಶಕ್ತಿ‌ ಬಂದ ನಂತರ 23,635 ಕ್ಕೆ ಅಧಿಕವಾಗಿದೆ. ಅದೇ ರೀತಿ ಯೋಜನೆ ಜಾರಿಗೂ ಮುನ್ನ ಒಟ್ಟು ಬಸ್ಸುಗಳು 23,948 ಇದ್ದವು. ಬಳಿಕ‌ 26,130 ಕ್ಕೆ ಏರಿಕೆಯಾಗಿವೆ. ಇನ್ನೂ ಹಳೆಯ 2,828 ವಾಹನಗಳನ್ನು ಬದಲಿಸಲಾಗಿದೆ.

ಕಳೆದ ಎರಡು ವರ್ಷದಲ್ಲಿ ನಾಲ್ಕೂ ಸಾರಿಗೆ ನಿಗಮಗಳಿಗೆ 185 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು ಸಾರಿಗೆ ನಿಗಮಗಳಿಗೆ ಲಭಿಸಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಕ್ತಿ ಯೋಜನೆಗೆ ಮುನ್ನ ಅಂದರೆ 2022-2023 ರಲ್ಲಿ ಸಾರಿಗೆ ಬಸ್ಸುಗಳಲ್ಲಿ ಪ್ರತಿ ದಿನ 85 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಆದರೆ ಈಗ 1.17 ಕೋಟಿ ಜನರು‌ ಪ್ರತಿ ದಿನ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆಯ ಹಿನ್ನೆಲೆ ಪ್ರಯಾಣಿಕರ ಸಂಖ್ಯೆಯು 30 ಲಕ್ಷ ಅಧಿಕವಾಗಿದೆ.

ಇನ್ನೂ ನಿಗಮವಾರು ಪ್ರಯಾಣಿಕರ ಸಂಖ್ಯೆ ಹಾಗೂ ಟಿಕೆಟ್ ವಿತರಣೆಯನ್ನು ಗಮನಿಸಿದಾಗ. ಪ್ರಮುಖವಾಗಿ ಕೆಎಸ್​​ಆರ್​ಟಿಸಿಯಿಂದ 152 ಕೋಟಿ ಜನ ಮಹಿಳಾ ಪ್ರಯಾಣಿಕರಿಗೆ 4,786 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಬಿಎಂಟಿಸಿಯಿಂದ 159 ಕೋಟಿ ಮಹಿಳಾ ಪ್ರಯಾಣಿಕರಿಗೆ 2,170 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇನ್ನೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 117 ಕೋಟಿ ಮಹಿಳಾ ಪ್ರಯಾಣಿಕರಿಗೆ 3,115 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 72 ಕೋಟಿ ನಾರಿಯರು ಪ್ರಯಾಣಿಸಿದ್ದಾರೆ. ಅವರಿಗೆ 2,521 ಕೋಟಿ ರೂಪಾಯಿಗಳನ್ನು ವ್ಯಯಿಸುವ ಮೂಲಕ ರಾಜ್ಯ ಸರ್ಕಾರ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ರಾಜ್ಯದಲ್ಲಿನ ಶಕ್ತಿ ಯೋಜನೆ ಹೀಗೆ ಮುಂದುವರೆಯಬೇಕಾ ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ

About The Author