Chikkaballapura News: ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ವರ್ತನೆಗೆ ಸ್ವಪಕ್ಷೀಯರೇ ಬೇಸತ್ತು ಹೋಗಿದ್ದಾರೆ. ಪ್ರದೀಪ್ ವಿರುದ್ಧ ಸ್ವತಃ ಕಾಂಗ್ರೆಸ್ಸಿಗರೇ, ಆಕ್ರೋಶ ಹೊರಹಾಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಗೆದ್ದರೆ, ತಾನು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ, ಪ್ರದೀಪ್ ಈಶ್ವರ್ ಹೇಳಿದ್ದರು. ಆದರೆ ಇದೀಗ ಪ್ರದೀಪ್ ಉಲ್ಟಾ ಹೊಡೆದಿದ್ದು, ನಾನು ಆಗ ಚಾಲೆಂಜ್ ಮಾಡಿದ್ದೆ. ಆ ಚಾಲೆಂಜ್ ಬಿಜೆಪಿ ಸ್ವೀಕರಿಸಿರಲಿಲ್ಲ. ಈಗಲೂ ನಾನು ಸಿದ್ಧನಿದ್ದೇನೆ. ಅವರು ಚಾಲೆಂಜ್ ಸ್ವೀಕರಿಸಲಿ, ಮತ್ತೆ ಎಲೆಕ್ಷನ್ ಮಾಡೋಣ. ಯಾರು ಗೆಲ್ತಾರೋ ನೋಡೋಣ. ಅವರು ಗೆದ್ದರೆ, ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ಇನ್ನು ಪ್ರದೀಪ್ ಈಶ್ವರ ಮಾತಿನಿಂದಲೇ ನಾವು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದು ಎಂದು ಕಾಂಗ್ರೆಸ್ ಕಾರ್ಯಕರ್ತ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಪುತ್ರ, ಎಸ್.ಎಂ.ಜಗದೀಶ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷದಿಂದ ಜಗದೀಶ್ ಅವರನ್ನು ಉಚ್ಛಾಟಿಸಲಾಗಿತ್ತು.
ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ, ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿರುವ ಜಗದೀಶ್ ಅವರ ಉಚ್ಛಾಟನಾ ಆದೇಶ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದರು. ಅಲ್ಲದೇ ಪ್ರದೀಪ್ ಈಶ್ವರ್ ವಿರುದ್ಧ ಸ್ವತಃ ಕಾಂಗ್ರೆಸ್ ನಾಯಕರೇ ಆಕ್ರೋಶ ಹೊರಹಾಕಿದ್ದಾರೆ. ಪ್ರದೀಪ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.



