ಮಕ್ಕಳಿಗೆ ಕಾಫಿ – ಟೀ ಬೇಡ : ಆರೋಗ್ಯಕರ ಪಾನೀಯವೇ ಉತ್ತಮ

ಇಂದಿನ ದಿನಗಳಲ್ಲಿ ಮಕ್ಕಳು ಕೂಡ ದೊಡ್ಡವರಂತೆ ಕಾಫಿ ಹಾಗೂ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದಾರೆ. ಆದರೆ ಮಕ್ಕಳ ದೇಹ ಮತ್ತು ಮೆದುಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಕಾಫಿ ಮತ್ತು ಟೀ ಯಲ್ಲಿರುವ ಕ್ಯಾಫಿನ್ ಅವರಿಗೆ ಸೂಕ್ತವಲ್ಲ. ಇದು ಮಕ್ಕಳ ನಿದ್ರೆಯನ್ನು ಕದಡುವುದರ ಜೊತೆಗೆ ಚಂಚಲತೆ ಮತ್ತು ಅತಿಯಾದ ಉತ್ಸಾಹವನ್ನುಂಟುಮಾಡಬಹುದು ಅಂತ ಮಕ್ಕಳ ತಜ್ಞರು ತಿಳಿಸಿದ್ದಾರೆ…

ನಿರಂತರವಾಗಿ ಕಾಫಿ ಅಥವಾ ಟೀ ಸೇವಿಸುವ ಮಕ್ಕಳಿಗೆ ಗಮನ ಕೇಂದ್ರೀಕರಣ ಕಡಿಮೆಯಾಗುವುದು, ತಲೆನೋವು, ಹೊಟ್ಟೆ ತೊಂದರೆ ಹಾಗೂ ಆತಂಕದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜೊತೆಗೆ, ಕ್ಯಾಫಿನ್ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೆಗೆ ಅಡ್ಡಿಯಾಗುವುದರಿಂದ ಎಲುಬಿನ ಬೆಳವಣಿಗೆಯ ಮೇಲೂ ದುಷ್ಪ್ರಭಾವ ಬೀರುವ ಸಾಧ್ಯತೆ ಇದೆ.

ಆದ್ದರಿಂದ ಪೋಷಕರು ಮಕ್ಕಳಿಗೆ ಕಾಫಿ ಮತ್ತು ಟೀ ಬದಲಾಗಿ ಹಾಲು, ಮಜ್ಜಿಗೆ, ಹಣ್ಣು ರಸಗಳು ಮತ್ತು ಆರೋಗ್ಯಕರ ಪಾನೀಯಗಳನ್ನು ನೀಡುವುದು ಉತ್ತಮ. ಬಾಲ್ಯದಲ್ಲೇ ಉತ್ತಮ ಆಹಾರ ಅಭ್ಯಾಸಗಳನ್ನು ಬೆಳೆಸಿದರೆ ಮಕ್ಕಳು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ. ಮಕ್ಕಳ ಭವಿಷ್ಯದ ಆರೋಗ್ಯ ನಮ್ಮ ಇಂದಿನ ಆಯ್ಕೆಯ ಮೇಲೆ ನಿಂತಿದೆ…

ವರದಿ : ಗಾಯತ್ರಿ ನಾಗರಾಜ್

About The Author