Sunday, September 8, 2024

Latest Posts

ಮಕ್ಕಳ ಶಿಕ್ಷಣಕ್ಕೆ ಸಂಕಷ್ಟ..!

- Advertisement -

www.karnatakatv.net :ಗದಗ: ಮಕ್ಕಳು ಶಾಲೆಗೆ ಹೋಗಬೇಕು ಎಂದರೆ ಹಳ್ಳ ದಾಟಿಕೊಂಡೆ ಹೋಗಬೇಕು, ಓದುವ ಆಸೆಯನ್ನು ಇಟ್ಟುಕೊಂಡಿರುವ ಮಕ್ಕಳ ಶಿಕ್ಷಣಕ್ಕೆ ಸಂಕಷ್ಟ ಎದುರಾಗಿದೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೊಕ್ಕರಗುಂದಿ ಗ್ರಾಮವು ಹಲವು ವರ್ಷಗಳಿಂದಲೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿದೆ. ಸಾರಿಗೆ ಬಸ್ ವ್ಯವಸ್ಥೆಯೂ ಸರಿಯಾಗಿ ಇಲ್ಲದೆ, ಹರಿಯುತ್ತಿರುವ ಎರಡು ಹಳ್ಳ ದಾಟಿದರೆ ಮಾತ್ರ ತರಗತಿಗಳಿಗೆ ಹಾಜರಿ ಬೀಳುತ್ತದೆ. ಗ್ರಾಮದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿದ್ದು, 800ಕ್ಕೂ ಅಧಿಕ ಮತದಾರರನ್ನು ಹೊಂದಿದೆ. ತಾಲೂಕಿನ ಕಡೇ ಹಳ್ಳಿ ಇದಾಗಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಹಾಳಾಗಿವೆ. 1ರಿಂದ 7ನೇ ತರಗತಿ ವರೆಗೂ ಸರ್ಕಾರಿ ಶಾಲೆ ಇದ್ದು, ಮುಂದೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಬೇರೆ ಸ್ಥಳಗಳಿಗೆ ತೆರಳುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದೆ ಇರುವುದರಿಂದ ಆರೋಗ್ಯ ತಪಾಸಣೆಗೂ ಬೇರೆ ಊರುಗಳನ್ನೇ ಅವಲಂಬಿಸಬೇಕಾಗಿದೆ.

ಇನ್ನೂ ಇಲ್ಲಿಯ ಬಹುತೇಕ ರೈತರು ತಮ್ಮ ಬ್ಯಾಂಕ್ ಖಾತೆಗಳನ್ನು ಬಾಲೇಹೊಸೂರ ಗ್ರಾಮದಲ್ಲಿಯೇ ಹೊಂದಿದ್ದು, ಇದಕ್ಕೂ ದೈನಂದಿನ ಕೆಲಸಗಳನ್ನು ಬಿಟ್ಟು ಅಲೆದಾಡಬೇಕಾಗಿದೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಮಾರಕವಾಗಿದ್ದು, ಪ್ರೌಢಶಾಲೆ ಸೇರಬೇಕೆಂದರೆ ಬೆಳ್ಳಟ್ಟಿ-ಲಕ್ಷ್ಮೇಶ್ವರ ಮುಂತಾದ ಕಡೆಗಳಿಗೆ ತೆರಳಬೇಕಾಗಿದೆ. ಬೆಳಗ್ಗೆ 07-15 ಕ್ಕೆ ಒಂದೇ ಒಂದು ಬಸ್ ಬಿಟ್ಟರೆ ಶಾಲೆಗೆ ಹೋಗುವ ಕನಸು ಹುಸಿಯಾಗುವುದಂತೂ ಸತ್ಯ.

ಒಟ್ಟಿನಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಸಾಕಷ್ಟು ಆಶ್ವಾಸನೆ ನೀಡುವ ಜನಪ್ರತಿನಿಧಿಗಳು ಹಾಗೂ ಜವಾಬ್ದಾರಿಯುತ ಶಾಸಕರು ಈ ಬಗ್ಗೆ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರುವುದು ಅವ್ಯವಸ್ಥೆಗೆ ಕಾರಣವಾಗಿದೆ. ಶಾಲೆಗೆ ಹೋಗುವ ಸಂದರ್ಭದಲ್ಲಿ ಯಾವುದಾದರೂ ಅವಘಡ ಸಂಭವಿಸಿದರೇ ಯಾರು ಜವಾಬ್ದಾರರು ಎಂಬುವಂತ ಯಕ್ಷ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಸಕರೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss