ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಭಾಗ. ಆದರೆ ಈ ಪ್ರದೇಶದ ಮೇಲೆ ಹಕ್ಕು ಹೇಳಿಕೆ ಸಲ್ಲಿಸುವ ಚೀನಾ, ಮತ್ತೊಮ್ಮೆ ಅಸಹನೀಯ ವರ್ತನೆ ತೋರಿಸಿರುವ ಘಟನೆ ಬೆಳಕಿಗೆ ಬಂದಿದೆ. ಲಂಡನ್‌ನಿಂದ ಜಪಾನ್‌ಗೆ ಪ್ರಯಾಣಿಸುತ್ತಿದ್ದ ಭಾರತೀಯ ಮಹಿಳೆಯನ್ನು, ಶಾಂಘೈ ವಿಮಾನ ನಿಲ್ದಾಣದಲ್ಲಿ ಅರುಣಾಚಲ ಭಾರತದ ಭಾಗ ಎಂದು ಉಲ್ಲೇಖಿಸಿರುವ ಕಾರಣಕ್ಕೆ, ಪಾಸ್‌ಪೋರ್ಟ್ ಅಮಾನ್ಯ ಎಂದು ಹೇಳಿ ತಡೆದ ಘಟನೆ ನಡೆದಿದೆ. ಪರಿಣಾಮ, ಮಹಿಳೆ ವಿಮಾನ ನಿಲ್ದಾಣದಲ್ಲೇ ಬರೋಬ್ಬರಿ 18 ಗಂಟೆಗಳ ಕಾಲ ಕಿರುಕುಳ ಅನುಭವಿಸಬೇಕಾಯಿತು.
ಅರುಣಾಚಲ ಪ್ರದೇಶ ಮೂಲದ ಪ್ರೇಮಾ ವಾಂಗ್ ಥೊಂಗ್‌ಡಾಕ್ ನವೆಂಬರ್ 21ರಂದು ಲಂಡನ್‌ನಿಂದ ಜಪಾನ್‌ಗೆ ಹೊರಟಿದ್ದರು. ಮಧ್ಯಂತರವಾಗಿ ಶಾಂಘೈ ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಲೇಓವರ್ ಇದ್ದಿತು. ಜಪಾನ್ ಪ್ರವೇಶಕ್ಕೆ ಅಗತ್ಯವಿರುವ ಎಲ್ಲ ದಾಖಲೆಗಳು, ವೀಸಾ ಸೇರಿದಂತೆ, ಸರಿಯಾಗಿದ್ದರೂ ಶಾಂಘೈ ಇಮಿಗ್ರೇಶನ್ ಅಧಿಕಾರಿಗಳು ಅವರ ಪಾಸ್‌ಪೋರ್ಸ್ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದರು. ಹುಟ್ಟಿದ ಸ್ಥಳವಾಗಿ ಅರುಣಾಚಲ ಪ್ರದೇಶ ಎಂಬ ಉಲ್ಲೇಖ ಕಂಡು, ಅದು ಚೀನಾದ ಭಾಗ, ಭಾರತಕ್ಕೆ ಸೇರಿಲ್ಲ ಎಂದು ಅಧಿಕಾರಿಗಳು ವಾದಿಸಿದರು. ಪಾಸ್‌ಪೋರ್ಟ್ ಅಮಾನ್ಯ ಎಂದು ಹೇಳುವುದರ ಜೊತೆಗೆ, ಚೀನಾ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿ ಎಂದು ವ್ಯಂಗ್ಯವಾಡಿದ ಆರೋಪವೂ ಕೇಳಿಬಂದಿದೆ.
ಲೇಓವರ್ ಮುಗಿದು ವಿಮಾನ ಹೊರಡುವ ಸಮಯ ಬಂದಾಗಲೂ ಪ್ರೇಮಾ ವಾಂಗ್‌ಗೆ ಪ್ರಯಾಣಕ್ಕೆ ಅನುಮತಿ ನೀಡಲಾಗಲಿಲ್ಲ. ಜಪಾನ್ ವೀಸಾ ಮತ್ತು ಇತರೆ ದಾಖಲೆಗಳನ್ನು ತೋರಿಸಿದರೂ ಪ್ರಯೋಜನವಾಗದೆ, 18 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಉಳಿಯಬೇಕಾಯಿತು. ಯಾವುದೇ ಸೂಕ್ತ ಸೌಲಭ್ಯ, ನೆರವು ಅಥವಾ ಸ್ಪಷ್ಟ ಮಾಹಿತಿ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.
ಕೊನೆಗೆ, ಲಂಡನ್‌ನಲ್ಲಿದ್ದ ಗೆಳತಿ ಮೂಲಕ ಶಾಂಘೈನ ಭಾರತೀಯ ರಾಯಭಾರ ಕಚೇರಿಗೆ ವಿಷಯ ತಿಳಿಸಲಾಗಿತು. ರಾಯಭಾರ ಅಧಿಕಾರಿಗಳ ಮಧ್ಯಪ್ರವೇಶದ ನಂತರವೇ ಚೀನಾ ಇಮಿಗ್ರೇಶನ್ ಅಧಿಕಾರಿಗಳು ಪ್ರಯಾಣ ಮುಂದುವರಿಸಲು ಅನುಮತಿ ನೀಡಿದರು. ಈ ಘಟನೆ ಬಗ್ಗೆ ತೀವ್ರ ಕುಸಿತ ವ್ಯಕ್ತಪಡಿಸಿದ ಪ್ರೇಮಾ ವಾಂಗ್, ಅರುಣಾಚಲ ಪ್ರದೇಶ ಭಾರತದ ಭಾಗ ಎಂಬ ಸತ್ಯವಿದ್ದರೂ ಚೀನಾ ಈ ರೀತಿಯ ಕಿರುಕುಳ ನೀಡುವುದು ಅಸ್ವೀಕಾರಾರ್ಹ. ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




