ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸುವುದು ಅನುಮಾನ. ಇದರ ಪರಿಣಾಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ IPLನಲ್ಲಿ ಎಲ್ಲಿ ಕಣಕ್ಕಿಳಿಯುತ್ತದೆ ಎಂಬ ಪ್ರಶ್ನೆ ಕ್ರೀಡಾಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ಆರ್‌ಸಿಬಿ ತಂಡವು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಧೀನದಲ್ಲಿರುವ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ತನ್ನ ಹೋಮ್ ಪಂದ್ಯಗಳನ್ನು ಆಯೋಜಿಸಲು ಮಾತುಕತೆ ನಡೆಸಿದೆ. ಹೀಗಾಗಿ, 2026ನೇ ಸಾಲಿನ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ಪುಣೆಯ ಮೈದಾನದಲ್ಲಿ ಆಡಲು ಸಾಧ್ಯತೆಗಳು ಹೆಚ್ಚಾಗಿವೆ.
ಎಂಸಿಎ ಕಾರ್ಯದರ್ಶಿ ಕಮಲೇಶ್ ಪಿಸಾಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಆರ್‌ಸಿಬಿ ಪರ್ಯಾಯ ಸ್ಥಳಗಳನ್ನು ಹುಡುಕುತ್ತಿದೆ. ನಮ್ಮ ಮೈದಾನವು ಐಪಿಎಲ್ ವೇಳೆಯಲ್ಲಿ ಲಭ್ಯವಿರುವುದರಿಂದ, ಇಲ್ಲಿ ಪಂದ್ಯಗಳನ್ನು ಆಯೋಜಿಸಲು ಸಾಧ್ಯ. ಅಂತಿಮ ನಿರ್ಧಾರ ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರ್ಘಟನೆ ಇನ್ನೂ ಎಲ್ಲರ ಮನಸ್ಸಿನಲ್ಲಿ ತಾಜಾ. ಆರ್‌ಸಿಬಿ ಪಂದ್ಯಾವಳಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ತನಿಖೆ ವೇಳೆ ಸ್ಟೇಡಿಯಂನಲ್ಲಿ ಹಲವು ಲೋಪದೋಷಗಳು ಹಾಗೂ ಭದ್ರತಾ ಕ್ರಮಗಳ ಕೊರತೆಗಳು ಬಹಿರಂಗವಾಗಿದ್ದವು. ಇದರಿಂದ ಬಿಸಿಸಿಐ ಈಗಾಗಲೇ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿಲ್ಲ.
ಇದೇ ಹಿನ್ನೆಲೆಯಲ್ಲಿ ಮುಂಬರುವ ಐಪಿಎಲ್ ಪಂದ್ಯಗಳಿಗೆ ಅಗತ್ಯ ಎನ್‌ಒಸಿ ಸಿಗುವ ಸಾಧ್ಯತೆಗಳೂ ಕುಂಠಿತವಾಗಿದ್ದು, ಆರ್‌ಸಿಬಿ ತಂಡ ಪುಣೆಯನ್ನು ತನ್ನ ಎರಡನೇ ತವರು ಮೈದಾನವಾಗಿ ಆಯ್ಕೆ ಮಾಡಲು ಮುಂದಾಗಿದೆ. ಹೀಗಾಗಿ, ಮುಂದಿನ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ಬೆಂಬಲಿಗರು ತಮ್ಮ ಪ್ರಿಯತಮ ತಂಡವನ್ನು ಚಿನ್ನಸ್ವಾಮಿ ಅಲ್ಲ, ಪುಣೆಯ ಎಂಸಿಎ ಮೈದಾನದಲ್ಲಿ ಕಾಣುವ ಸಾಧ್ಯತೆ ಬಹಳ ಹೆಚ್ಚು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

