ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ಪೂರ್ಣಗೊಂಡಿದೆ. ಈಗ 2,200ಕ್ಕೂ ಹೆಚ್ಚು ಪುಟಗಳ ಭಾರೀ ಚಾರ್ಜ್‌ಶೀಟ್‌ನ್ನು ಸಲ್ಲಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ, ತನಿಖೆ ಅಧಿಕೃತವಾಗಿ ಮುಗಿದಿದೆ.
ತನಿಖೆಯಲ್ಲಿ RCB, KSCA ಮತ್ತು DNA ಸಂಸ್ಥೆಗಳು ನೇರವಾಗಿ ಜವಾಬ್ದಾರವೆಂದು ಸಿಐಡಿ ತೀರ್ಮಾನಿಸಿದೆ. ಟಿಕೆಟ್ ವ್ಯವಸ್ಥೆಯ ಅಸಂಗತಿ, ಯಾವುದೇ ಸೆಕ್ಯುರಿಟಿ ಪ್ಲಾನ್ ಇಲ್ಲದಿರುವುದು, ಪೊಲೀಸರಿಗೆ ಸರಿಯಾದ ಮಾಹಿತಿ ಹಂಚದೇ ಕಾರ್ಯಕ್ರಮ ಆಯೋಜಿಸಿರುವುದು—ಎಲ್ಲವೂ ಗಂಭೀರ ನಿರ್ಲಕ್ಷ್ಯ ಎಂದು ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿದೆ. ನೂರಾರು ಪ್ರತ್ಯಕ್ಷ ಸಾಕ್ಷಿಗಳು, ಸಿಸಿಟಿವಿ ದೃಶ್ಯಗಳು, ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಿ ಸಾಕ್ಷ್ಯಗಳನ್ನೆಲ್ಲ ಸಂಗ್ರಹಿಸಲಾಗಿದೆ.
ಐಪಿಎಲ್ 18ನೇ ಸೀಸನ್ ಚಾಂಪಿಯನ್ ಆದ RCB ತಂಡದ ಸಂಭ್ರಮಾಚರಣೆಗೆ, ಸಾವಿರಾರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದಾಗ ದೊಡ್ಡ ಮಟ್ಟದ ನೂಕುನುಗ್ಗಲು ಉಂಟಾಯಿತು. ನಿಯಂತ್ರಣ ತಪ್ಪಿದ ಜನಸ್ತೋಮದಲ್ಲಿ ಕಾಲ್ತುಳಿತ ನಡೆದಿದ್ದು, 11 ಮಂದಿ ಪ್ರಾಣ ಕಳೆದುಕೊಂಡರು ಮತ್ತು ಅನೇಕರಿಗೆ ಗಾಯಗಳಾಗಿದ್ದವು. ಈಗ, ಈ ದುರಂತಕ್ಕೆ ಯಾರು ಕಾರಣ ಎನ್ನುವುದಕ್ಕೆ ಸಿಐಡಿ ಚಾರ್ಜ್‌ಶೀಟ್ ಸ್ಪಷ್ಟ ಉತ್ತರ ನೀಡಲು ಸಿದ್ಧವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

