ಕೋಟೆನಾಡು ಚಿತ್ರದುರ್ಗ ಈ ಬಾರಿ ಭಕ್ತಿಯ ಹಬ್ಬದಲ್ಲಿ ಮುಳುಗಿದೆ. ಗಣೇಶ ಚತುರ್ಥಿಯ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಬೀದಿ ಬೀದಿಗಳಲ್ಲಿ ದೀಪಾಲಂಕಾರ, ಸಡಗರ, ಜಾತ್ರೆಯ ಖುಷಿ ಎಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಚಿತ್ರದುರ್ಗದಲ್ಲಿ ಪ್ರತಿ ವರ್ಷ ಬೃಹತ್ ಶೋಭಯಾತ್ರೆ ಇಲ್ಲಿ ನಡೆಯುತ್ತೆ. ಇಡೀ ಏಷ್ಯಾ ಖಂಡದಲ್ಲಿಯೇ ಮುಂಬೈ ನಂತರದ ಎರಡನೇ ಅತಿ ದೊಡ್ಡ ಶೋಭಾಯಾತ್ರೆಯಾಗಿದೆ
ಪ್ರತಿ ವರ್ಷದಂತೆ ಈ ಬಾರಿ ಸಹ ಚಿತ್ರದುರ್ಗದಲ್ಲಿ ಭವ್ಯ ಶೋಭಾಯಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಸೆಪ್ಟೆಂಬರ್ 13 ರಂದು ನಡೆಯಲಿರುವ ಬೃಹತ್ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಭದ್ರತೆಗಾಗಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದು, ಈ ಶೋಭಾಯಾತ್ರೆ ಆಯ್ದ ಭದ್ರತಾ ಕ್ರಮಗಳೊಂದಿಗೆ ಮುಂಬೈ ಬಳಿಕ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಗಣೇಶ ವಿಸರ್ಜನಾ ಮೆರವಣಿಗೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಗರದ ವ್ಯಾಪ್ತಿಯಲ್ಲಿ ಭದ್ರತೆಗಾಗಿ 9 ASP, 28 DSP, 78 PI, 175 PSI, 401 ASI, 2678 ಹೆಡ್ ಕಾನ್‌ಸ್ಟೆಬಲ್ ಮತ್ತು PC, 500 ಹೋಮ್ ಗಾರ್ಡ್ ಅನ್ನು ನಿಯೋಜಿಸಲಾಗಿದೆ. 16 ತುಕಡಿಗಳು ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ ಹಾಗೂ 14 ತುಕಡಿಗಳು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು ರ್ಯಾಪಿಡ್ ಆಕ್ಷನ್ ಪೋಸ್ಟ್ ನಿಯೋಜಿಸಲು ಕ್ರಮಕೈಗೊಳ್ಳಲಾಗಿದೆ.
ಈ ಬಾರಿಯ ಶೋಭಾಯಾತ್ರೆಯಲ್ಲಿ ಡಿಜೆ ನಿಷೇಧವನ್ನು ಜಾರಿಗೆ ತರಲಾಗಿದೆ. ಶಾಂತಿಯುತ ಹಾಗೂ ಸಂಸ್ಕೃತಿಕ ಮೆರವಣಿಗೆಗೆ ಒತ್ತು ನೀಡಲಾಗಿದೆ. ಸಾರ್ವಜನಿಕರ ಸಹಕಾರದಿಂದ ಶಿಸ್ತುಬದ್ಧ ಮೆರವಣಿಗೆ ನಿರೀಕ್ಷಿಸಲಾಗಿದೆ.
ಬಂದೋಬಸ್ತ್ ಪ್ರಯುಕ್ತ ನಗರದಾದ್ಯಂತ ಪ್ರಮುಖ 151 ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು 26 ಕಣ್ಗಾವಲು ವೇದಿಕೆಗಳನ್ನು ನಿರ್ಮಿಸಲಾಗಿದೆ. ಮೆರವಣಿಗೆ ಮಾರ್ಗದಲ್ಲಿನ ವೀಡಿಯೋ ಚಿತ್ರೀಕರಣಕ್ಕೆಂದು 67 ವಿಡಿಯೋ ಕ್ಯಾಮೆರಾಗಳೊಂದಿಗೆ ಸಿಬ್ಬಂದಿಯವರನ್ನು ನಿಯೋಜಿಸಲಾಗಿರುತ್ತದೆ.
ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿನ ಎತ್ತರದ ಕಟ್ಟಡಗಳ ಮೇಲೆ 49 sky ಸೆಂಟ್ರಿಗಳನ್ನು ನಿಯೋಜಿಸಲಾಗಿರುತ್ತದೆ. ಅಲ್ಲದೇ 8 ದ್ರೋಣ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವರದಿ : ಲಾವಣ್ಯ ಅನಿಗೋಳ