ರಾಜಕೀಯವಾಗಿ ಭಾರಿ ವಾಕ್ಸ್‌ಮರ ಏರ್ಪಟ್ಟಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಚಿತ್ತಾಪುರದಲ್ಲಿ ನವೆಂಬರ್ 2ರಂದು ಆರ್‌ಎಸ್‌ಎಸ್ ಶತಾಬ್ದಿ ಪಥಸಂಚಲನ ನಡೆಯುತ್ತಾ? ಎಂಬ ಕುತೂಹಲಕ್ಕೆ ಅಕ್ಟೋಬರ್ 30ರಂದು ತೆರೆ ಬೀಳಲಿದೆ. ಪಥಸಂಚಲನಕ್ಕೆ ಅನುಮತಿ ಕೋರಿ ಸಂಘ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅಂತಿಮ ಹಂತ ತಲುಪಿದ್ದು, ಗುರುವಾರ ಕೋರ್ಟ್ ತೀರ್ಪು ಹೊರಬೀಳಲಿದೆ.
ಈ ತೀರ್ಪು ಚಿತ್ತಾಪುರ ಮಾತ್ರವಲ್ಲದೆ ರಾಜ್ಯದ ರಾಜಕೀಯ ವಲಯದಲ್ಲಿಯೂ ದೊಡ್ಡ ಚರ್ಚೆಯ ವಿಷಯವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ತವರು ಪ್ರದೇಶದಲ್ಲೇ ಪಥಸಂಚಲನ ನಡೆಯಬಹುದೇ ಎಂಬ ಪ್ರಶ್ನೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ಅಕ್ಟೋಬರ್ 19ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಸಲ್ಲಿಸಿದ್ದ ಆರ್‌ಎಸ್‌ಎಸ್ ಅರ್ಜಿಯನ್ನು ತಹಸೀಲ್ದಾರ್ ನಿರಾಕರಿಸಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಸಂಘ ಹೈಕೋರ್ಟ್‌ನ ಮೊರೆ ಹೋಗಿತ್ತು. ಆಗ ಹೈಕೋರ್ಟ್ ಹೊಸ ದಿನಾಂಕ ನಿಗದಿ ಮಾಡಿ, ಅದೇ ದಿನಕ್ಕೆ ಅನುಮತಿ ಕೋರುವಂತೆ ಸೂಚಿಸಿತ್ತು. ನಂತರ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್ ಅವರು ನವೆಂಬರ್ 2ರಂದು ಪಥಸಂಚಲನಕ್ಕಾಗಿ ಮರುಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಈ ಹಿಂದೆ ಪಥಸಂಚಲನಕ್ಕೂ ಮುನ್ನ ಶಾಂತಿಸಭೆ ನಡೆಸುವಂತೆ ಮತ್ತು ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಆದರೆ ಆ ಸಭೆಯಲ್ಲಿ ಅಶಾಂತಿಯ ವಾತಾವರಣ ಉಂಟಾದ್ದರಿಂದ ಒಮ್ಮತಕ್ಕೆ ಬರಲಾಗಲಿಲ್ಲ. ಇದೀಗ ಜಿಲ್ಲಾಡಳಿತ ಸಲ್ಲಿಸಿರುವ ವರದಿ ಆಧರಿಸಿ ಕೋರ್ಟ್ ಅಂತಿಮ ತೀರ್ಪು ನೀಡಲಿದೆ.
ಆರ್‌ಎಸ್‌ಎಸ್ ಶತಮಾನೋತ್ಸವದ ಪಥಸಂಚಲನ ಯಾರ ವಿರುದ್ಧವೂ ಅಲ್ಲ. ಅದು ದೇಶಭಕ್ತ ಸ್ವಯಂಸೇವಕರ ಗೌರವಯುತ ಪಥಸಂಚಲನ ಎಂದು ಸಂಘದ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಪಥಸಂಚಲನಗಳು ಶಾಂತಿಯುತವಾಗಿ ನಡೆದಿವೆ. ಚಿತ್ತಾಪುರದಲ್ಲೂ ಅದೇ ರೀತಿಯ ಶಾಂತಿ ಮತ್ತು ಸಹಕಾರ ಕಾಪಾಡಬೇಕಾಗಿದೆ. ಹೀಗಾಗಿ ನ.2ರ ಪಥಸಂಚಲನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಚಿತ್ತಾಪುರ ಪಥಸಂಚಲನ ವಿಚಾರದಲ್ಲಿ ಹೈಕೋರ್ಟ್ ತೀರ್ಪು ರಾಜ್ಯದ ರಾಜಕೀಯ ತಾಪಮಾನವನ್ನು ಹೆಚ್ಚಿಸಬಹುದಾದ ಬೆಳವಣಿಗೆಯಾಗಿದೆ. ಅಕ್ಟೋಬರ್ 30ರ ತೀರ್ಪು ಸಂಘದ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುತ್ತದೆಯೇ ಅಥವಾ ಬ್ರೇಕ್ ಹಾಕುತ್ತದೆಯೇ ಎಂಬುದನ್ನು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ

