ಬಿಡಿಎ ಕಿಕ್‌ಬ್ಯಾಕ್ ಪ್ರಕರಣ ಸಂಬಂಧ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫ್ಯಾಮಿಲಿಗೆ ಬಿಗ್ ರಿಲೀಫ್ ಸಿಕ್ಕಿದೆ. 12 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದ ಕೇಸ್ ಸಂಬಂಧ, ಬಿಎಸ್‌ವೈ, ಪುತ್ರ ಬಿ.ವೈ. ವಿಜಯೇಂದ್ರ, ಕುಟುಂಬ ಸದಸ್ಯರು ಹಾಗೂ ಉಚ್ಚಾಟಿತ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್‌ಗೆ, ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿದ್ದಾರೆ.
ಲಂಚ ಸ್ವೀಕಾರ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ, ಸೆಪ್ಟೆಂಬರ್ 15ರಂದು ಲೋಕಾಯುಕ್ತ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ತನಿಖಾಧಿಕಾರಿ ಹಾಗೂ ಡಿವೈಎಸ್ಪಿ ಎಂ.ಎಚ್.ಸತೀಶ್ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಕೆಗೆ ದೂರುದಾರ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂಗೆ, ಲೋಕಾಯುಕ್ತ ನ್ಯಾಯಾಲಯ ಸೂಚನೆ ನೀಡಿದೆ.
2020ರಲ್ಲಿ ಹೊಸಕೋಟೆ ಸಮೀಪದ ಕೋನದಾಸಪುರದಲ್ಲಿ, 116 ಕೋಟಿ ರೂ. ವೆಚ್ಚದ ವಸತಿ ಸಮುಚ್ಚಯ ನಿರ್ಮಾಣ ಯೋಜನೆಯನ್ನು ಬಿಡಿಎ ರೂಪಿಸಿತ್ತು. ಈ ಯೋಜನೆಯ ಕಾಮಗಾರಿಯನ್ನು ರಾಮಲಿಂಗಂ ಕಂಪನಿಯ, ಚಂದ್ರಕಾಂತ್ ರಾಮಲಿಂಗಂಗೆ ನೀಡಲಾಗಿತ್ತು. ಈ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಅಂದಿನ ಬಿಡಿಎ ಆಯುಕ್ತ ಜೆ.ಸಿ. ಪ್ರಕಾಶ್ ಮೂಲಕ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗುತ್ತಿಗೆದಾರರು ಲಂಚ ಕೊಟ್ಟಿದ್ದಾರೆ. ಸರ್ಕಾರದ ಇತರೆ ಇಲಾಖೆಗಳ ಕೋಟ್ಯಂತರ ವೆಚ್ಚದ ಯೋಜನೆಗಳ ಗುತ್ತಿಗೆಗಳೂ, ರಾಮಲಿಂಗಂ ಕಂಪನಿಗೆ ಸಿಗುವಂತೆ ಮಾಡಲಾಗಿದೆ ಅಂತಾ ಆರೋಪಿಸಲಾಗಿತ್ತು.
ಇದಕ್ಕೆ ಪ್ರತಿಫಲವಾಗಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮತ್ತು ಸಂಬಂಧಿ ಸಂಜಯ ಶ್ರೀ, ಪಾಲುದಾರಿಕೆಯ ಖಾಸಗಿ ಕಂಪನಿಗೆ ಕೋಲ್ಕತ್ತಾ ಮೂಲದ 7 ಶೆಲ್ ಕಂಪನಿಗಳಿಂದ 4.5 ಕೋಟಿ ಬಂದಿತ್ತು. ಒಟ್ಟಾರೆ ಗುತ್ತಿಗೆಯಲ್ಲಿ ಯಡಿಯೂರಪ್ಪ ಕುಟುಂಬಕ್ಕೆ ಗುತ್ತಿಗೆದಾರ ರಾಮಲಿಂಗಂ ಅವರಿಂದ, 12 ಕೋಟಿ ರೂ. ಕಿಕ್ ಬ್ಯಾಕ್ ಸಂದಾಯವಾಗಿದೆ ಎಂದು ಗಂಭೀರ ಆಪಾದನೆ ಕೇಳಿ ಬಂದಿತ್ತು. 2022ರ ಸೆಪ್ಟೆಂಬರ್ 15ರಂದು ಕಿಕ್ ಬ್ಯಾಕ್ ಆರೋಪದ ಬಗ್ಗೆ ತನಿಖೆ ನಡೆಸುವಂತೆ, ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಆದೇಶಿಸಿತ್ತು.
ಇದೀಗ ಅಂತಿಮವಾಗಿ ಆಪಾದನೆಗೆ ಸಾಕ್ಷ್ಯಗಳು ಸಿಗದ ಕಾರಣಕ್ಕೆ, ಸುದೀರ್ಘಾವಧಿಯ ತನಿಖೆಗೆ ಇತಿಶ್ರೀ ಹಾಡಿ , ಯಡಿಯೂರಪ್ಪ ಸೇರಿ 9 ಆರೋಪಿಗಳ ವಿರುದ್ಧ ‘ಬಿ’ ರಿಪೋರ್ಟ್ ಸಲ್ಲಿಸಲಾಗಿದೆ.




