Thursday, November 27, 2025

Latest Posts

CM, 5 ಸಚಿವರು + ಶಾಸಕರು : ರಾಜಣ್ಣ ಮನೆಯಲ್ಲಿ ಲೆಕ್ಕಾಚಾರ!

- Advertisement -

ತುಮಕೂರಿನಲ್ಲಿ ಇಂದು ನಡೆಯುತ್ತಿರುವ ಔತಣಕೂಟ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸದಲ್ಲಿ ಆಯೋಜಿಸಿರುವ ಈ ಭೋಜನ ಕೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಹಾಜರಾಗುತ್ತಿರುವುದು ಕಾಂಗ್ರೆಸ್ ವಲಯದಲ್ಲೇ ಚರ್ಚೆಯ ವಿಷಯವಾಗಿದೆ.

ನವೆಂಬರ್ ಕ್ರಾಂತಿ ಎಂಬ ವಿವಾದಾತ್ಮಕ ಹೇಳಿಕೆಯ ನಂತರ ರಾಜಣ್ಣ ಅವರು ಆಯೋಜಿಸಿರುವ ಈ ಔತಣಕೂಟ ಪ್ರಮುಖವಾಗಿದೆ. ಸಿದ್ದರಾಮಯ್ಯ ಬಣದ ನಿಷ್ಠಾವಂತರಾದ ರಾಜಣ್ಣ, ಸಂಪುಟದಿಂದ ವಜಾಗೊಂಡ ನಂತರವೂ ಸಿಎಂ ಜೊತೆಗಿನ ನಂಟು ಪ್ರದರ್ಶಿಸುತ್ತಿರುವುದು ಹೈಕಮಾಂಡ್ ಮಟ್ಟದಲ್ಲೂ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಬಣದ ಪ್ರಮುಖ ಸಚಿವರಾದ ಡಾ. ಜಿ. ಪರಮೇಶ್ವರ, ಎಚ್.ಸಿ. ಮಹದೇವಪ್ಪ, ಎಂ.ಪಿ. ಪಾಟೀಲ್, ದಿನೇಶ್ ಗುಂಡೂರಾವ್ ಮತ್ತು M.C ಸುಧಾಕರ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರೂ ಈ ಭೋಜನಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.

ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರ ಸಭೆ ಮುಗಿಸಿದ ನಂತರ ಮಧ್ಯಾಹ್ನ 2 ಗಂಟೆಗೆ ಸಿಎಂ ಸಿದ್ದರಾಮಯ್ಯ ತುಮಕೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಮಧ್ಯಾಹ್ನ 2.30ರಿಂದ 3.30ರವರೆಗೆ ಕ್ಯಾತ್ಸಂದ್ರದಲ್ಲಿರುವ ರಾಜಣ್ಣ ಅವರ ನಿವಾಸದಲ್ಲಿ ಆಯೋಜಿಸಿರುವ ಈ ಔತಣಕೂಟದಲ್ಲಿ ಭಾಗವಹಿಸುವ ಕಾರ್ಯಕ್ರಮವೂ ಈಗ ಅಧಿಕೃತ ವೇಳಾಪಟ್ಟಿಗೆ ಸೇರಿದೆ.

ರಾಜಣ್ಣ ನೀಡಿದ್ದ ನವೆಂಬರ್ ಕ್ರಾಂತಿ ಹೇಳಿಕೆ ಈಗ ಹೊಸ ತಿರುವು ಪಡೆಯುತ್ತಿದೆ. ಈ ಭೋಜನಕೂಟವೇ ಆ ಕ್ರಾಂತಿಯ ಮೊದಲ ಅಧ್ಯಾಯವಾಗುತ್ತದೆಯೇ? ಅಥವಾ ಸಿದ್ದು–ಡಿಕೆಶಿ ಬಣದ ಆಂತರಿಕ ರಾಜಕೀಯಕ್ಕೆ ಹೊಸ ಬಣ್ಣ ನೀಡುವ ನಾಟಕೀಯ ವೇದಿಕೆಯಾಗುತ್ತದೆಯೇ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿವೆ.

ಒಟ್ಟಿನಲ್ಲಿ, ತುಮಕೂರಿನ ಈ ಭೋಜನ ಕೂಟ ಕೇವಲ ರಾಜಣ್ಣರ ಮನೆಯಲ್ಲಿ ನಡೆಯುವ ಔತಣವಲ್ಲ. ಅದು ಕಾಂಗ್ರೆಸ್‌ನೊಳಗಿನ ಬಣ ರಾಜಕೀಯದ ಹೊಸ ಅಂಕಣವನ್ನು ತೆರೆಯುವ ರಾಜಕೀಯ ಭೋಜನವೂ ಆಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss