ಬೆಂಗಳೂರು: ಕೊರೋನಾ ತಂದಿಟ್ಟಂತ ಆರ್ಥಿಕ ಸಂಕಷ್ಟದಿಂದಾಗಿ ಶಾಸಕರ ಅನುದಾನ ಬಿಡುಗಡೆಗೆ ಸಿಎಂ ಬಸವರಾಜ ಬೊಮ್ಮಾಯಿ ಬ್ರೇಕ್ ಹಾಕಿದ್ದರು. ಇದೇ ಕಾರಣದಿಂದಾಗಿ ಅನೇಕ ಶಾಸಕರು ಸಿಎಂ ಬೊಮ್ಮಾಯಿ ವಿರುದ್ಧವೇ ಅಸಮಾಧಾನಗೊಂಡಿದ್ದರು. ಇದೀಗ ಈ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ, ಬಂಪರ್ ಗಿಫ್ಟ್ ನೀಡಿದ್ದಾರೆ.
ಹೌದು.. ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದಂತ ಶಾಸಕರ ಮುನಿಸು ತಣಿಸೋದಕ್ಕಾಗಿ, ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿಯೇ ಸಿಎಂ ಬೊಮ್ಮಾಯಿಯವರು, ಈಗ ಹೆಚ್ಚು ಹೆಚ್ಚು ಅನುದಾನವನ್ನು ಬಿಡುಗಡೆ ಮಾಡುವ ಮೂಲಕ, ಮುನಿಸು ಶಮನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲೇ ಸಿಎಂ ವಿರುದ್ಧದ ಅಲೆಯನ್ನು ತಣ್ಣಗಾಗಿಸೋ ನಿಟ್ಟಿನಲ್ಲಿ, ಈ ಮಹತ್ವದ ಹೆಜ್ಜೆ ಇರಿಸಿರುವಂತ ಅವರು, ಕೊನೆಗೂ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ಅನುದಾನವನ್ನು ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯೊಂದರಿಂದಲೇ ಸುಮಾರು 1,300 ಕೋಟಿಗೂ ಹೆಚ್ಚು ಅನುದಾನವನ್ನು ಪಕ್ಷದ ಶಾಸಕರ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ. ಕೆಲವು ಶಾಸಕರ ಕ್ಷೇತ್ರಗಳಿಗೆ 40 ರಿಂದ 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದರೇ, ಮತ್ತೆ ಕೆಲವು ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಶಾಸಕರ ಬೇಗುದಿ ತಣ್ಣಗಾಗುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ.




