ಬೆಂಗಳೂರು: ವಿಶ್ವಾಸಮತ ಸಾಬೀತುಪಡಿಸಿ ಅಗ್ನಿ ಪರೀಕ್ಷೆ ಗೆದ್ದ ಬಿ.ಎಸ್ ಯಡಿಯೂರಪ್ಪ ಇದೀಗ ಸಚಿವ ಸಂಪುಟ ರಚನೆಗೆ ಮುಂದಾಗಿದ್ದಾರೆ. ಸಚಿವ ಸಂಪುಟಕ್ಕೆ ಮೊದಲ ಪಟ್ಟಿ ಸಿದ್ಧಪಡಿಸಲಾಗಿದ್ದು, ಈ ಕುರಿತು ಸಿಎಂ ಯಡ್ಯೂರಪ್ಪ, ಹೈಕಮಾಂಡ್ ಜೊತೆ ಚರ್ಚಿಸಿ ಸಚಿವರ ಪಟ್ಟಿ ಫೈನಲ್ ಮಾಡಲಿದ್ದಾರೆ.
ಸಿಎಂ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ ರಚನೆ ಕಸರತ್ತು ಶುರುವಾಗಿದ್ದು ಮೊದಲ ಪಟ್ಟಿ ರೆಡಿಯಾಗಿದೆ. ಬಿಎಸ್ವೈ ಮೊದಲ ಪಟ್ಟಿಯಲ್ಲಿ ಶಾಸಕ ಆರ್.ಆಶೋಕ್, ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ, ಮಾಧುಸ್ವಾಮಿ, ಈಶ್ವರಪ್ಪ, ಜಗದೀಶ್ ಶೆಟ್ಟರ್, ಸಿ.ಟಿ ರವಿ,ಅರವಿಂದ್ ಲಿಂಬಾವಳಿ, ಗೋವಿಂದ ಕಾರಜೋಳ ಹಾಗೂ ಪಕ್ಷೇತರ ಶಾಸಕ ನಾಗೇಶ್ ಹೆಸರು ಮುಂಚೂಣಿಯಲ್ಲಿದೆ.
ಇನ್ನು ಸರ್ಕಾರ ರಚನೆ ಕುರಿತು ಅವಸರ ಮಾಡುತ್ತಿದ್ದ ಸಿಎಂ ಬಿಎಸ್ವೈ ಇದೀಗ ಸಂಪೂರ್ಣವಾಗಿ ಸಂಪುಟ ರಚನೆಗೆ ಮುಂದಾಗದಿರುವುದಕ್ಕೂ ಕಾರಣ ಇದೆ. ಅನರ್ಹ ಶಾಸಕರ ಪೈಕಿ ಸುಮಾರು 10 ಮಂದಿಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಇದೀಗ ಪಕ್ಷೇತರ ಅಭ್ಯರ್ಥಿ ಸೇರಿದಂತೆ 10 ಮಂದಿಗೆ ಮಾತ್ರ ಕ್ಯಾಬಿನೆಟ್ ನಲ್ಲಿ ಜಾಗ ನೀಡಲು ಯಡಿಯೂರಪ್ಪ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಅನರ್ಹ ಶಾಸಕರ ಕಾನೂನು ಹೋರಾಟ ಒಂದು ಹಂತ ತಲುಪಿದ ನಂತರ ಸಂಪುಟ ವಿಸ್ತರಣೆಗೆ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್ ಕೂಡ ಸಮ್ಮತಿಸಿದ್ದು, ನಾಳೆ ಯಡಿಯೂರಪ್ಪ ಮತ್ತು ಶಾಸಕ ಮಾಧುಸ್ವಾಮಿ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚಿಸಿ ಪಟ್ಟಿ ಫೈನಲ್ ಮಾಡಲಿದ್ದಾರೆ. ಇನ್ನು ಬಿಎಸ್ವೈ ಲೆಕ್ಕಾಚಾರದಂತೆ ಎಲ್ಲವೂ ನಡೆದರೆ ಶುಕ್ರವಾರವೇ ಸಂಪುಟ ರಚನೆಯಾಗುವ ಸಾಧ್ಯತೆ ಇದೆ.