Wednesday, August 6, 2025

Latest Posts

ಸಿದ್ದು-DK ಜಗಳದಲ್ಲಿ 3ನೇಯವರಿಗೆ CM ಕುರ್ಚಿ!

- Advertisement -

ರಾಜ್ಯದಲ್ಲಿ ಸಿಎಂ ಬದಲಾವಣೆಯ ಕಾವು ಸದ್ಯದ ಮಟ್ಟಿಗೆ ತಣ್ಣಗಾಗಿದೆ. ಆದರೆ, ತೆರೆಮರೆಯಲ್ಲಿ ಇದಕ್ಕೆ ಸಂಬಂಧಿಸಿದ ಬೆಳವಣಿಗೆಗಳು, ಚರ್ಚೆಗಳು ಒಳಗೊಳಗೆ ಇನ್ನೂ ನಡೆಯುತ್ತಲೇ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ವಿಜಯಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಬೇಸರವನ್ನು ವ್ಯಕ್ತ ಪಡಿಸಿದ್ದರು.

ಮಲ್ಲಿಕಾರ್ಜುನ ಖರ್ಗೆಯವರಿಗೆ ಹಿಂದೆಯೂ ಕೂಡ ಮುಖ್ಯಮಂತ್ರಿ ಸ್ಥಾನವನ್ನು ರಾಜ್ಯದ ಕೆಲವರು ತಪ್ಪಿಸಿದ್ದರು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೂಡ ಆರೋಪವನ್ನು ಮಾಡಿದ್ದರು. ಈಗ, ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ, ಇದೆ ಎನ್ನಲಾಗುತ್ತಿರುವ ಎರಡು ಬಣಗಳ ತಿಕ್ಕಾಟದ ನಡುವೆ, ಖರ್ಗೆಯವರ ಹೆಸರು ಚರ್ಚೆಗೆ ಬರಲಾರಂಭಿಸಿದೆ. ಇನ್ನೊಂದು ಕಡೆ ಸೆಪ್ಟೆಂಬರ್‌ ಕ್ರಾಂತಿ ಎಂದು ಸಿದ್ದರಾಮಯ್ಯನವರ ಸಂಪುಟದ ಕೆಲವು ಸದಸ್ಯರು ಹೇಳುತ್ತಿದ್ದಾರೆ.

2023ರಲ್ಲಿ ಅಭೂತಪೂರ್ವ ಜನಾದೇಶದ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ, ಮುಖ್ಯಮಂತ್ರಿಗಳ ಆಯ್ಕೆ ವಿಚಾರ, ಹೈಕಮಾಂಡಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆಗ, ಎರಡೂವರೆ ವರ್ಷದ ನಂತರ ಪವರ್ ಶೇರಿಂಗ್ ಒಪ್ಪಂದ ನಡೆದಿತ್ತು ಎಂದು ಖುದ್ದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು.‌ ಇದು, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು. ಇದಾದ ನಂತರ, ಸಿದ್ದರಾಮಯ್ಯನವರ ಪರವಾಗಿ ಇರುವವರು ಮತ್ತು ಡಿಕೆ ಶಿವಕುಮಾರ್ ಪರವಾಗಿ ಇರುವವರು ಹೇಳಿಕೆಯನ್ನು ನೀಡಲಾರಂಭಿಸಿದ್ದರು. ಮತ್ತೊಂದು ಕಡೆ, ದೆಹಲಿ ಮಟ್ಟದಲ್ಲಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ, ಡಿಕೆ ಶಿವಕುಮಾರ್ ದಾಳವನ್ನು ಉರುಳಿಸುತ್ತಿದ್ದರು ಎಂದು ವರದಿಯಾಗಿತ್ತು.

ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಎನ್ ರಾಜಣ್ಣ ಮುಂತಾದ ನಾಯಕರು, ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿದ್ದರಂತೆ. ಒಂದು ವೇಳೆ, ಸಿಎಂ ಬದಲಾವಣೆ ಮಾಡುವುದೇ ಆದರೆ, ನೀವೇ ರಾಜ್ಯ ರಾಜಕಾರಣಕ್ಕೆ ಬನ್ನಿ ಎನ್ನುವ ಆಹ್ವಾನವನ್ನು ನೀಡಿದ್ದಾರೆ ಎನ್ನುವ ಸುದ್ದಿಯು, ಹರಿದಾಡುತ್ತಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬರಲು ಮಲ್ಲಿಕಾರ್ಜುನ ಖರ್ಗೆಯವರನ್ನು ಅವಲಂಬಿತರಾಗಿದ್ದ ಡಿಕೆ ಶಿವಕುಮಾರ್ ಅವರಿಗೆ, ಈಗ ಎಐಸಿಸಿ ಅಧ್ಯಕ್ಷರು ರಾಜ್ಯ ರಾಜಕಾರಣಕ್ಕೆ ಬರುವ ಸಾಧ್ಯತೆಯ ಸುದ್ದಿ ಕಸಿವಿಸಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ, ಖರ್ಗೆ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಡಿಕೆಶಿ ಬಹುವಾಗಿ ನೆಚ್ಚಿಕೊಂಡಿದ್ದರು.
ಸಚಿವರ ಭೇಟಿಯ ನಂತರ ಮಲ್ಲಿಕಾರ್ಜುನ ಖರ್ಗೆಯವರು ವಿಜಯಪುರದಲ್ಲಿ ಸಿಎಂ ಹುದ್ದೆ ತಪ್ಪಿದರ ಬಗ್ಗೆ ಹೇಳಿಕೆಯನ್ನು ನೀಡಿದ್ದು ಎನ್ನುವುದು ಕುತೂಹಲಕಾರಿ ವಿಚಾರ. ಸದ್ಯದ ಅಂತೆಕಂತೆ ಸುದ್ದಿ, ವ್ಯಾಖ್ಯಾನಗಳ ನಡುವೆ, ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆಯೇ ಎನ್ನುವ ಅನುಮಾನ ಕಾಡುವುದಂತೂ ಸಹಜ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss