ಸಿಎಂ, ಡಿಸಿಎಂ ಬೆನ್ನಿಗಿದ್ದಾರೆ, ಅದೇ ಕಿಡಿಗೇಡಿಗಳಿಗೆ ಧೈರ್ಯ – ಪ್ರಹ್ಲಾದ್ ಜೋಶಿ!

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಸಚಿವ ಡಾ. ಕೆ. ಸುಧಾಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಿಂದಿನ ಕಾರಣ ಕಾಂಗ್ರೆಸ್ ಸರ್ಕಾರದ ‘ತುಷ್ಟೀಕರಣ ರಾಜಕೀಯ’ವೆಂದು ಅವರು ಆರೋಪಿಸಿದ್ದಾರೆ.

ಸಿಎಂ, ಡಿಸಿಎಂ ಬೆನ್ನಿಗಿದ್ದಾರೆ ಎಂಬ ಧೈರ್ಯದಿಂದ ಕಿಡಿಗೇಡಿಗಳು ಇಂಥ ಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ಧ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ತೀವ್ರ ಆತಂಕಕಾರಿ ವಿಷಯ ಎಂದು ಹೇಳಿದರು.

ಪಾಕಿಸ್ತಾನದಲ್ಲಿಯೇ ತಿನ್ನಲು ಕೂಳಿಲ್ಲ. ಆದರೆ ಇಲ್ಲಿರುವ ಕೆಲವರು, ನಮ್ಮ ದೇಶದ ಅನ್ನ ತಿಂದು, ಪಾಕ್ ಪರ ಘೋಷಣೆಗಳನ್ನು ಕೂಗುತ್ತಾರೆ. ಇವೆಲ್ಲಕ್ಕೂ ಕಾಂಗ್ರೆಸ್‌ನ ತುಷ್ಟೀಕರಣ ನೀತಿಯೇ ಕಾರಣ ಎಂದು ಅವರು ಕಿಡಿ ಕಾರಿದರು.

ಮದ್ದೂರಿನಲ್ಲಿ ನಡೆದ ಈ ಘಟನೆಯ ಹಿನ್ನೆಲೆಯಲ್ಲಿ, ಮಾಜಿ ಸಚಿವ ಡಾ. ಕೆ. ಸುಧಾಕರ್ ಕೂಡ ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ಹಿಂದೂ ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದೆ. ಗಣೇಶ ಮೆರವಣಿಗೆಗೆ ಅನುಮತಿ ನೀಡಲಾಗುತ್ತಿಲ್ಲ. ಆದರೆ, ಇತರ ಕೋಮಿನವರಿಗೆ ಎಲ್ಲ ಪರವಾನಗಿಗಳು ಸಿಗುತ್ತಿವೆ. ಇದು ನಿಜವಾದ ದ್ವಂದ್ವ ನೀತಿಯಾಗಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‌ನ ವಿಭಜಕ ರಾಜಕೀಯವು ಕರ್ನಾಟಕವನ್ನು ಭಯ ಮತ್ತು ಅಶಾಂತಿಯ ಪರಿಸ್ಥಿತಿಗೆ ಕೊಂಡೊಯ್ಯುತ್ತಿದೆ. ಇದು ನಮ್ಮ ಪ್ರಜಾಪ್ರಭುತ್ವಕ್ಕೂ ಅಪಾಯಕಾರಿಯಾಗಿದೆ. ಜನತೆ ಈ ರಾಜಕೀಯ ಯುಕ್ತಿಗಳನ್ನು ಅರಿಯಬೇಕು ಮತ್ತು ಬದಲಾವಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಈ ಘಟನೆಗಳ ಹಿನ್ನೆಲೆ ಕುರಿತು ಪ್ರತಿಕ್ರಿಯಿಸಿದ ಜೋಶಿ ಮತ್ತು ಸುಧಾಕರ್, ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರವಾಗಿ ಹರಿಹಾಯ್ದರು. ಮಸೀದಿಯಿಂದ ಕಲ್ಲು ತೂರಾಟ, ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಹಿಂದೂಗಳ ಹಬ್ಬಗಳಿಗೆ ತಡೆ – ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆ ಮತ್ತು ತುಷ್ಟೀಕರಣದ ರಾಜಕೀಯವನ್ನು ಸ್ಪಷ್ಟಪಡಿಸುತ್ತಿವೆ ಎಂದು ಹೇಳಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author