ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸ್ಪಷ್ಟಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಏನು ಚರ್ಚೆ ಆಯಿತು ಎಂಬುದು ನನಗೆ ತಿಳಿದಿಲ್ಲ. ಆದರೆ ಈಗ ಎಲ್ಲವೂ ತಿಳಿಯಾಗಿದೆ ಎಂದು ನಾವು ಅಂದುಕೊಂಡಿದ್ದೇವೆ.
ನಮ್ಮಲ್ಲಿ ಯಾವುದೇ ಗೊಂದಲವೇ ಇಲ್ಲ. ಅನಾವಶ್ಯಕವಾಗಿ ಕೆಲವು ಗೊಂದಲಗಳ ಸೃಷ್ಟಿ ಆಯ್ತು. ಅದಕ್ಕೆ ಮಾಧ್ಯಮವೂ ಕಾರಣ ಎಂದು ಹೇಳಿದರು. ಡಿಸೆಂಬರ್ 8 ಅಧಿವೇಶನ ಇದೆ. ಸೆಶನ್ ಗೆ ಹೋಗ್ತಾಯಿದಿವಿ. ಈ ವಿಚಾರದಲ್ಲಿ ನಾನು ಹೆಚ್ಚಾಗಿ ಪ್ರತಿಕ್ರಿಯೆ ನೀಡಲ್ಲ.
ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದ ನಂತರ ಎಲ್ಲವೂ ಇತ್ಯರ್ಥವಾಗಿದೆ. ಸಣ್ಣಪುಟ್ಟ ವ್ಯತ್ಯಾಸಗಳು ಸಹ ಈಗ ಸರಿಹೋಗಿವೆ ಎಂದು ಸ್ಪಷ್ಟಪಡಿಸಿದರು. ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಲವು ಜ್ವಲಂತ ವಿಷಯಗಳ ಕುರಿತು ಚರ್ಚೆಗೆ ಸಜ್ಜಾಗಿದೆ. ವಿಪಕ್ಷಗಳು ಚರ್ಚೆಗೆ ತಯಾರಾಗಿದ್ದಾರೆ. ನಾವು ವಿಶ್ವಾಸದಿಂದ ಕೆಲಸ ಮುಂದುವರಿಸುತ್ತೇವೆ ಎಂದು ಗೃಹ ಸಚಿವರು ಹೇಳಿದರು.
ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ನೀಡಿದ ರಾಜಕೀಯ ಶಾಶ್ವತವಲ್ಲ ಎಂಬ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಪರಮೇಶ್ವರ್ ಪ್ರತಿಕ್ರಿಯಿಸಿದಂತೆ, ರಾಜಕೀಯ ಶಾಶ್ವತವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಯಾಕೆ ಸಿಎಂ ಆ ರೀತಿಯ ಹೇಳಿಕೆ ನೀಡಿದ್ರು ಎಂಬುದನ್ನು ಅವರನ್ನೇ ಕೇಳಬೇಕು ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ

