ಶೀಘ್ರ ಸಿಎಂ–ಡಿಸಿಎಂಗೆ ಹೈಕಮಾಂಡ್ ಬುಲಾವ್?

ಜನವರಿ 22ರಿಂದ ಆರಂಭವಾಗಿದ್ದ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬುಧವಾರ ತೆರೆ ಬಿದ್ದಿದ್ದು, ಇದರೊಂದಿಗೆ ಕಾಂಗ್ರೆಸ್ ಪಕ್ಷದೊಳಗಿನ ಕುರ್ಚಿ ಕದನ ಮತ್ತೆ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶೀಘ್ರವೇ ಕಾಂಗ್ರೆಸ್ ಹೈಕಮಾಂಡ್ ದಿಲ್ಲಿಗೆ ಕರೆಸಿಕೊಳ್ಳಬಹುದೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದೆ.

ಸಂಕ್ರಾಂತಿ ಬಳಿಕ ರಾಜ್ಯ ನಾಯಕತ್ವ ಬದಲಾವಣೆ ಕುರಿತ ಮಾತುಕತೆಗಳು ತೀವ್ರಗೊಳ್ಳಲಿವೆ ಎಂಬ ನಿರೀಕ್ಷೆ ಇದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್ ಜಿ’ ಕಾಯ್ದೆಗೆ ವಿರೋಧ ವ್ಯಕ್ತಪಡಿಸಲು ದಿಢೀರನೆ ಜನವರಿ 22ರಿಂದ ಅಧಿವೇಶನ ಕರೆದಿದ್ದರು. ಆರಂಭದಲ್ಲಿ ಕೇವಲ ಎರಡು ದಿನಗಳೆಂದು ಘೋಷಿಸಲಾಗಿದ್ದ ಅಧಿವೇಶನವನ್ನು ಒಟ್ಟು ಒಂಬತ್ತು ದಿನಗಳವರೆಗೆ ವಿಸ್ತರಿಸುವಲ್ಲಿ ಸರ್ಕಾರ ಯಶಸ್ವಿಯಾಯಿತು.

ಇದರ ಪರಿಣಾಮವಾಗಿ ಆಡಳಿತ ಪಕ್ಷದೊಳಗಿನ ರಾಜಕೀಯ ಚಟುವಟಿಕೆಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಈಗ ಅಧಿವೇಶನ ಮುಗಿದಿರುವುದರಿಂದ, ಸಿಎಂ–ಡಿಸಿಎಂರನ್ನು ದಿಲ್ಲಿಗೆ ಕರೆಸಿ ಹೈಕಮಾಂಡ್ ಸಮಾಲೋಚನೆ ನಡೆಸಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ವಿಧಾನಸಭೆಯ ಮೊಗಸಾಲೆಯಲ್ಲೇ ಆಡಳಿತ ಪಕ್ಷದ ಶಾಸಕರು ಈ ಬಗ್ಗೆ ಗಂಭೀರ ಚರ್ಚೆ ನಡೆಸಿರುವುದು ಗಮನಸೆಳೆಯಿತು.

ಇನ್ನು ಅಧಿವೇಶನ ಮುಗಿದಿದೆ… ದಿಲ್ಲಿಯಿಂದ ಇಬ್ಬರಿಗೂ ಕರೆ ಬರಬಹುದೇ? ಎಂಬ ಪ್ರಶ್ನೆಗಳು ಕಾಂಗ್ರೆಸ್ ವಲಯದಲ್ಲಿ ಸುತ್ತಾಡುತ್ತಿವೆ.ಆದರೆ ಮತ್ತೊಂದೆಡೆ, ದಿಲ್ಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ನಿರತರಾಗಿದ್ದಾರೆ.

ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 5ರಿಂದ ಮುಂದಿನ ಬುಧವಾರದವರೆಗೆ ರಾಜ್ಯ ಬಜೆಟ್ ಪೂರ್ವಭಾವಿ ಸಭೆಗಳ ಸರಣಿಯಲ್ಲಿ ಭಾಗವಹಿಸುವ ಕಾರ್ಯಕ್ರಮವನ್ನು ಈಗಾಗಲೇ ನಿಗದಿಪಡಿಸಿಕೊಂಡಿದ್ದಾರೆ. ಹೀಗಾಗಿ ಸಿಎಂ ಹಾಗೂ ಡಿಸಿಎಂಗೆ ತಕ್ಷಣವೇ ದಿಲ್ಲಿಯಿಂದ ಕರೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ವರದಿ : ಲಾವಣ್ಯ ಅನಿಗೋಳ

About The Author