ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ರಾಜಕೀಯ ಪೈಪೋಟಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸಿದ್ದರಾಮಯ್ಯ ಬಣ ಅಹಿಂದ ನಾಯಕರ ಬೆಂಬಲವನ್ನು ಗಟ್ಟಿಗೊಳಿಸುತ್ತಿರುವಾಗ, ಡಿ.ಕೆ. ಶಿವಕುಮಾರ್ ಬಣ ಒಕ್ಕಲಿಗ ಸಮುದಾಯದ ಬೆಂಬಲಕ್ಕೆ ಮೊರೆ ಹೋಗುತ್ತಿದೆ.
ದೆಹಲಿಯಲ್ಲಿ ಹೈಕಮಾಂಡ್ ಮಹತ್ವದ ಸಭೆ ನಡೆಯಲಿರುವ ಸಂದರ್ಭದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರು ಹಾಗೂ ನಾಯಕರೊಂದಿಗೆ ಕಾವೇರಿ ನಿವಾಸದಲ್ಲಿ ತುರ್ತು ಚರ್ಚೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಗೆ ಸಚಿವರು ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹಾಜರಿದ್ದರು. ಅಹಿಂದ ಸಮುದಾಯದ ಪ್ರಮುಖ ಮುಖಂಡರು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವುದು ಪೈಪೋಟಿಯ ರಾಜಕೀಯಕ್ಕೆ ಹೊಸ ತಿರುವು ನೀಡಿದೆ.
ಬೆಳಿಗ್ಗೆ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಹೆಸರಿನಲ್ಲಿ ನಡೆದ ಮುಚ್ಚಿದ ಬಾಗಿಲಿನ ಸಭೆಯಲ್ಲೂ ಅಹಿಂದ ನಾಯಕರ ಗುಂಪು ಸೇರಿಕೊಂಡಿತ್ತು. ಈ ಮಾತುಕತೆ ಬಳಿಕ ಸತೀಶ್ ಜಾರಕಿಹೊಳಿ ನೇರವಾಗಿ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ್ದು, ನಂತರ ಇತರ ನಾಯಕರು ಕೂಡ ಆಗಮಿಸಿದರು.
ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಗೆ ಮುನ್ನವೇ ಸಿದ್ದರಾಮಯ್ಯ ಬಣ ರಾಜಕೀಯ ಒತ್ತಡವನ್ನು ಹೆಚ್ಚಿಸಲು ಸಭೆಗಳ ಸರಣಿ ನಡೆಸುತ್ತಿರುವುದು ಅತಿ ಹೆಚ್ಚು ಗಮನಸೆಳೆಯುತ್ತಿದೆ.
ವರದಿ : ಲಾವಣ್ಯ ಅನಿಗೋಳ

