ಎದುರಾಳಿಯನ್ನು ಅಲುಗಾಡೋದಕ್ಕೂ ಬಿಡದಂಥಾ ಸ್ಥಿತಿಗೆ ತಂದು ನಿಲ್ಲಿಸಿದಾಗ ಹೇಳೋ ಮಾತು ಚೆಕ್ ಮೆಟ್. ಚದುರಂಗದಾಟದಲ್ಲಿ ಈ ಮಾತನ್ನ ಹೇಳೋದಕ್ಕೂ ಮುನ್ನ ಎದುರಾಳಿಯನ್ನ ಟ್ರ್ಯಾಪ್ ಮಾಡಿರ್ತಾರೆ. ಚಾಣಾಕ್ಷ ಹಾಗೂ ಜಾಣ್ಮೆಯ ಆಟದ ಮೂಲಕ ಕಟ್ಟಿ ಹಾಕಿರುತ್ತಾರೆ. ರಾಜ್ಯ ರಾಜಕಾರಣದಲ್ಲಿ ಮಂಗಳವಾರ ಒಂದೇ ದಿನ ಇಬ್ಬರು ನಾಯಕರು ಇಂಥದ್ದೊಂದು ಚೆಕ್ ಮೆಟ್ ಹೇಳಿಕೆ ನೀಡಿದ್ದಾರೆ ಅನಿಸುತ್ತದೆ. ಅದುವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿ. ವೈ. ವಿಜಯೇಂದ್ರ.
ರಾಜ್ಯಾಧ್ಯಕ್ಷರು ಬದಲಾಗುತ್ತಾರೆ ಅನ್ನೋ ಕೂಗು ಎಬ್ಬಿಸಿದ್ದವರಿಗೆ ಸೈಲೆಂಟಾಗಿಯೇ ಠಕ್ಕರ್ ಕೊಟ್ಟು ವಿಜಯೇಂದ್ರ ಭರ್ಜರಿಯಾಗಿ ಮತ್ತೆ ಟ್ರ್ಯಾಕ್ ಗೆ ಬಂದಿದ್ದಾರೆ. ಮಂಗಳವಾರ ಖುದ್ದು ವಿಜಯೇಂದ್ರ ಆಡಿರೋ ಒಂದು ಮಾತು ಎದುರಾಳಿಗೆ ಚೆಕ್ ಮೆಟ್ ಎಂದೇ ಹೇಳಬಹುದು. ಕಾರಣ ಇಷ್ಟೇ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಬಣದ ಬಂಡುಕೋರರು ಎಂದೇ ಹೇಳಲಾಗುವ ಒಂದಷ್ಟು ನಾಯಕರು ವಿಜಯೇಂದ್ರ ಅವರಿಗೆ ಮತ್ತೊಂದು ಸುತ್ತಿಗೆ ರಾಜ್ಯಾಧ್ಯಕ್ಷರಾಗೋದನ್ನ ತಪ್ಪಿಸೋ ಪ್ರಯತ್ನಗಳು ಮಾಡಿದ್ದರು ಅನ್ನೋದು ಜಗಜ್ಜಾಹೀರಾಗಿರೋ ಸಂಗತಿ. ಆದರೇ, ಮಾಗಿದ ಮಾಸ್ ಲೀಡರ್ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಹೆಣೆದ ವ್ಯೂಹ ಫಲಿಸಿದಂತೆ ಕಾಣುತ್ತಿದೆ. ಹಾಗಾಗಿಯೇ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇಲ್ಲ. ನಾನೇ ಆ ಸ್ಥಾನದಲ್ಲಿ ಮುಂದುವರೆಯುತ್ತೇನೆ ಅನ್ನೋ ಧಾಟಿಯಲ್ಲಿ ಮಾತಾಡಿದ್ದಾರೆ.
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಚೆಕ್ ಮೆಟ್ ಮಾದರಿಯಲ್ಲೇ ಖಡಕ್ ಸಂದೇಶ ನೀಡಿದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಬದಲಾಗುತ್ತಾರೆ, ಡಿಕೆ ಶಿವಕುಮಾರ್ ಅವರಿಗೆ ಒಂದು ಚಾನ್ಸ್ ಸಿಗಬೇಕು, ಅಧಿಕಾರ ಹಂಚಿಕೆ ಲೆಕ್ಕಾಚಾರದಲ್ಲೇ ಇದು ಆಗುತ್ತದ ಅನ್ನೋ ಮಾತನ್ನ ಡಿಕೆ ಶಿವಕುಮಾರ್ ಬಣದ ಶಾಸಕರು ಹೇಳಿಕೆ ನೀಡಿದ್ದರು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಹ ಇಂಥದ್ದೇ ಪ್ರಶ್ನೆಯನ್ನ ಕೇಳಿದ್ದರು ಎನ್ನಲಾಗುತ್ತಿದೆ. ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಗಟ್ಟಿಯಾಗಿಯೇ ಡಿಕೆ ಸಿಎಂ ಆಗ್ಬೇಕು ಅಂದಿದ್ರು. ಬಿ.ಆರ್ ಪಾಟೀಲ್ ಸಿದ್ದರಾಮಯ್ಯ ಅವರನ್ನ ಲಾಟರಿ ಸಿಎಂ ಅಂತೆಲ್ಲಾ ಹೇಳೋ ಮೂಲಕ ಬಂಡಾಯದ ಸುಳಿವು ನೀಡಿದ್ದರು. ಆದರೇ, ನಂದಿ ಬೆಟ್ಟದಲ್ಲಿ ನಡೆಯುತ್ತಿರೋ ವಿಶೇಷ ಸಚಿವ ಸಂಪುಟ ಸಭೆಗೂ ಮುನ್ನ ಸಿದ್ದರಾಮಯ್ಯ ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಅನ್ನೋ ಮೂಲಕ ಚೆಕ್ ಮೆಟ್ ಹೇಳಿಕೆ ನೀಡಿದ್ದಾರೆ.
ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಅವರ ನಾನೇ ಪೂರ್ಣಾವಧಿ ಸಿಎಂ ಅನ್ನೋ ಎರಡು ಚೆಕ್ ಮೆಟ್ ಹೇಳಿಕೆಗಳು ಒಂದೇ ದಿನ ಹೊರ ಬರುವ ಮೂಲಕ ಮತ್ತೂ ಒಂದು ಖಡಕ್ ಸಂದೇಶ ರವಾನಿಸಿದಂತೆ ಕಾಣುತ್ತಿದೆ. ಹಾಗಾಗಿಯೇ ಎರಡೂ ರಾಷ್ಟ್ರೀಯ ಪಕ್ಷಗಳು ಈ ಇಬ್ಬರು ನಾಯಕರ ಚೆಕ್ ಮೆಟ್ ಹೇಳಿಕೆಗಳ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ದಾಳಗಳನ್ನ ಉರುಳಿಸುವ ಸಾಧ್ಯತೆ ಇದೆ. ಅಲ್ಲಿಗೆ ಎರಡೂ ಕಡೆಗಳ ಗೊಂದಲಕ್ಕೂ ಈ ಇಬ್ಬರೂ ನಾಯಕರು ತಮ್ಮ ಕಡೆಯಿಂದ ಫುಲ್ ಸ್ಟಾಪ್ ಇಟ್ಟ ಮೆಸೇಜ್ ಕೊಟ್ಟಿದ್ದಾರೆ ಎಂದೇ ಹೇಳಬಹುದು.
ವರದಿ : ಭೂತರಾಜು