ದಾವಣಗೆರೆ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಐದು ವರ್ಷ ನಾನೇ ಅಧಿಕಾರ ನಡೆಸುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ. ಆದರೆ ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆಗೆ ಮುಂದಾಗದೆ ಸೈಲೆಂಟ್ ಆಗಿದ್ದಾರೆ.
ಇದೀಗ ಇದೇ ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್ ನೀಡಿರುವ ಡಿಕೆ ಶಿವಕುಮಾರ್ ಆಪ್ತ ಶಾಸಕ ಶಿವಗಂಗಾ ಬಸವರಾಜ್, ಸಿದ್ದರಾಮಯ್ಯ ಹೇಳಿರುವ ಐದು ವರ್ಷದಲ್ಲಿ ಡಿಸೆಂಬರ್ ಕೂಡಾ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಡಿಸೆಂಬರ್ ಕ್ರಾಂತಿಯ ಸುಳಿವು ನೀಡಿದ್ದಾರೆ.
ಖುದ್ದು ಸಿದ್ದರಾಮಯ್ಯ ಅವರೇ ಹೇಳಿದ ಬಳಿಕವೂ ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿ ವ ವಿಚಾರಕ್ಕೆ ಆಂತರಿಕ ಬೇಗುದಿ ಇನ್ನೂ ಸಹ ಕಡಿಮೆಯಾಗಿಲ್ಲ. ಒಂದು ಕಡೆ ಡಿಕೆ ಶಿವಕುಮಾರ್ ಮೌನವಾಗಿದ್ದರೆ. ಅವರ ಆಪ್ತರು ತಮ್ಮ ನಾಯಕನ ಪರ ಬ್ಯಾಟ್ ಬೀಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ರಾಮನಗರದ ಶಾಸಕ ಇಕ್ಬಾಲ್ ಹುಸೇನ್, ಮಂಡ್ಯದ ಶಾಸಕ ರವಿ ಗಣಿಗ ಬಳಿಕ ಇದೀಗ ಮತ್ತೆ ಶಿವಗಂಗಾ ಬಸವರಾಜ ಡಿಕೆ ಪರ ಒಲವನ್ನು ತೋರಿದ್ದಾರೆ.
ಇನ್ನೂ ಸಿದ್ದರಾಮಯ್ಯ ಬಣದಲ್ಲೂ ಸಹ ಹಲವು ನಾಯಕರು ಸಿದ್ದು ಪರ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಈ ನಡುವೆಯೇ ಡಿಸೆಂಬರ್ ಬಗ್ಗೆ ಡಿಕೆಶಿ ಆಪ್ತನ ಹೇಳಿಕೆಯು ಕೈ ಪಾಳಯದಲ್ಲಿ ಕುರ್ಚಿ ಕಲಹದ ಹೊಗೆ ಇನ್ನೂ ಸಹ ಆರಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.