ರಾಜ್ಯದ ನಾಯಕತ್ವದ ಕುರಿತ ರಾಜಕೀಯ ಆತಂಕದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಸಿದ್ಧತೆಯನ್ನು ಹೊಸ ವರ್ಷದ ಮೊದಲ ವಾರದಿಂದ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಹೊಸ ವರ್ಷದ ಮೊದಲ ವಾರದಿಂದಲೇ ಬಜೆಟ್ ಪ್ರಕ್ರಿಯೆ ಆರಂಭವಾಗಲಿದ್ದು, ಫೆಬ್ರವರಿ ಎರಡನೇ ವಾರದೊಳಗೆ ಆಯವ್ಯಯ ಮಂಡನೆ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಆದ್ರೆ ದಿನಾಂಕವನ್ನ ಅಂತಿಮಗೊಳಿಸಿಲ್ಲ. ಕಳೆದ ವರ್ಷ 4,09,549 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿ ಈ ಮೊತ್ತ 4.50 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆಯಿದೆ. ಸಿದ್ದರಾಮಯ್ಯ ಅವರು ಈವರೆಗೆ 16 ಬಜೆಟ್ ಮಂಡಿಸಿ ರಾಜ್ಯದಲ್ಲಿ ಅತಿಹೆಚ್ಚು ಆಯವ್ಯಯ ಮಂಡಿಸಿದ ದಾಖಲೆ ಹೊಂದಿದ್ದಾರೆ. ಈಗ 17ನೇ ಬಜೆಟ್ ಮಂಡಿಸಲು ತಯಾರಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
2025-26ರಲ್ಲಿಪಂಚ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಈ ಸರಕಾರ ಬಂದ ಕಳೆದೆರಡು ವರ್ಷದಿಂದಲೂ ಅಭಿವೃದ್ಧಿ ಯೋಜನೆಗಳ ನಿರೀಕ್ಷೆಗೆ ಸ್ಪಂದನೆ ಸಿಕ್ಕಿಲ್ಲ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಹೊಸ ಬಜೆಟ್ನಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಬೃಹತ್ ನೀರಾವರಿ, ಆಸ್ತಿ ಸೃಜನೆಗೆ ಸಂಬಂಧಿಸಿದ ಯೋಜನೆಗಳಿಗೆ ಒತ್ತು ಸಿಗುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ವರದಿ : ಲಾವಣ್ಯ ಅನಿಗೋಳ




