DK ವಾಪಸ್ ಬರ್ತಿದ್ದಂತೆ ದೆಹಲಿಗೆ ಸಿದ್ದು ಆಪ್ತರು!

ರಾಜ್ಯ ಕಾಂಗ್ರೆಸ್‌ನಲ್ಲಿ ಕ್ಷಣಕ್ಷಣಕ್ಕೂ ನವೆಂಬರ್‌ ಕ್ರಾಂತಿಯ ಜ್ವಾಲೆ ಹೆಚ್ಚಾಗುತ್ತಿದೆ. ಕ್ರಾಂತಿ ಸಂಘರ್ಷ ಬೆನ್ನಲ್ಲೇ ಇಬ್ಬರು ಘಟಾನುಘಟಿ ನಾಯಕರು, ದಿಢೀರ್‌ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಭಾನುವಾರಷ್ಟೇ ಡಿಸಿಎಂ ಡಿ.ಕೆ. ಶಿವಕುಮಾರ್‌ ದೆಹಲಿಗೆ ಹೋಗಿದ್ರು. ಆದ್ರೆ ರಾಹುಲ್‌ ಗಾಂಧಿ ಭೇಟಿಗೆ ಅವಕಾಶ ಸಿಗದ ಕಾರಣಕ್ಕೆ ಬರಿಗೈಯಲ್ಲಿ ವಾಪಸ್ ಆಗಿದ್ರು.

ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಮತ್ತು ಸಚಿವರಾದ ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ ದಿಲ್ಲಿಗೆ ಹೋಗಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲರನ್ನು ಭೇಟಿಯಾಗಲಿದ್ದಾರಂತೆ. ಭೇಟಿಯಲ್ಲಿ ಸಂಪುಟ ಪುನಾರಚನೆ ವೇಳೆ ಹಿರಿಯರನ್ನು ಕೈಬಿಡುವ ವಿಚಾರದ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದೆ ಎನ್ನಲಾಗ್ತಿದೆ.

ಆದರೂ, ಡಿಕೆಶಿ ದಿಲ್ಲಿ ಭೇಟಿ ಬೆನ್ನಲ್ಲೇ ಸಿಎಂ ಆಪ್ತರು ಹೋಗಿರೋದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಸಂಪುಟ ಪುನಾರಚನೆ ವೇಳೆ ಅಗತ್ಯಬಿದ್ರೆ ಸಚಿವ ತ್ಯಾಗಕ್ಕೆ ಸಿದ್ದ ಎಂದು, ಈಗಾಗಲೇ ಕೃಷ್ಣ ಭೈರೇಗೌಡ ಬಹಿರಂಗವಾಗಿ ಹೇಳಿದ್ದಾರೆ. ಈ ತ್ಯಾಗದ ಹೇಳಿಕೆ ಮಧ್ಯೆ ದೆಹಲಿ ಪರೇಡ್‌ ಮುಂದುವರೆದಿದೆ.

ಸಿಎಂ ಬದಲಾಗ್ತಾರೋ ಅಥವಾ ಪುನಾರಚನೆಯಾಗುತ್ತೋ. ಏನೇ ಆದ್ರೂ ಸುಸೂತ್ರವಾಗೇ ಆಗುತ್ತದೆ. ಯಾವುದೇ ಗೊಂದಲಗಳು ಇಲ್ಲದೇ ಒಳ್ಳೆಯ ತೀರ್ಮಾನವೇ ಆಗುತ್ತದೆ. ಹೈಕಮಾಂಡ್‌ ಒಳ್ಳೆಯ ತೀರ್ಮಾನವನ್ನೇ ಮಾಡುತ್ತದೆ. ನಮ್ಮಲ್ಲಿ ಬಿಜೆಪಿಯಂತೆ ಗೊಂದಲಗಳು ಆಗುವುದಿಲ್ಲ ಅಂತಾ, ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅದೇನೇ ಇದ್ರೂ, ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ, ನವೆಂಬರ್‌ನಲ್ಲಿ ಬಹುದೊಡ್ಡ ಕ್ರಾಂತಿಯಾಗುವ ಮುನ್ಸೂಚನೆ ಸಿಗುತ್ತಿದೆ.

About The Author