ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ. ಬೆಳಗಾವಿಯಲ್ಲಿ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯರ ಈ ಹೇಳಿಕೆ ಸಂಚಲನ ಮೂಡಿಸಿದೆ. ಇದೀಗ ಯತೀಂದ್ರ ಅವರು ತಮ್ಮ ಹೇಳಿಕೆಯನ್ನ ತಾವೇ ಸಮರ್ಥನೆ ಮಾಡಿಕೊಂಡಿದ್ದಾರೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಮೈಸೂರಲ್ಲಿ ಸ್ಪಷ್ಪಪಡಿಸಿದ್ದಾರೆ.
ಮೈಸೂರಲ್ಲಿ ತಮ್ಮ ಹಿಂದಿನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ನನ್ನ ಹೇಳಿಕೆಯಲ್ಲಿ ತಪ್ಪೇನಿಲ್ಲ. ನನ್ನ ಹೇಳಿಕೆಯನ್ನು ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಕ್ಷದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಪಕ್ಷ ನೋಟಿಸ್ ಕೊಟ್ಟರೆ ಅದಕ್ಕೆ ನಾನು ಉತ್ತರ ಕೊಡ್ತೀನಿ. ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗವಾಗಿ ಮಾತಾಡಲ್ಲ. ನೋಟಿಸ್ ಬಂದಾಗ ನೋಡಿಕೊಳ್ಳೋಣ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿರಲಿಲ್ಲ.
ಈ ಬಗ್ಗೆ ಪಕ್ಷದಲ್ಲೇ ನಾನು ಮಾತಾಡ್ತೀನಿ. ಹೇಳಿಕೆ ವಿವಾದದ ರೂಪ ಪಡೆದುಕೊಂಡ ಮೇಲೆ, ಬೆಳಗಾವಿಯಲ್ಲೇ ಸ್ಪಷ್ಟನೆ ಕೊಟ್ಟಿದ್ದೇನೆ. ನಾನು ಇದರ ಬಗ್ಗೆ ಮತ್ತೆ ಏನನ್ನೂ ಹೇಳೋದಕ್ಕೆ ಇಷ್ಟ ಇಲ್ಲ. ಏನ್ ಹೇಳಬೇಕೋ ಎಲ್ಲವನ್ನೂ ಹೇಳಿ ಆಗಿದೆ. ಸ್ಪಷ್ಟನೆಯನ್ನೂ ಕೊಟ್ಟಾಗಿದೆ. ಅನಗತ್ಯವಾಗಿ ಡ್ರ್ಯಾಗ್ ಮಾಡಿ ವಿವಾದ ಕ್ರಿಯೇಟ್ ಮಾಡೋಕೆ ಇಷ್ಟ ಇಲ್ಲ.
ನಮ್ಮ ಪಕ್ಷದಲ್ಲಿ ಅಹಿಂದ ಮತ್ತು ಸಾಮಾಜಿಕ ಬದ್ಧತೆ ಇರುವವರು ಬೇಕಾದಷ್ಟು ನಾಯಕರು ಇದ್ದಾರೆ. ಅವರೆಲ್ಲರಿಗೂ ಲೀಡ್ ಮಾಡೋಕೆ ಅರ್ಹತೆ ಇದೆ. ನವೆಂಬರ್ ಕ್ರಾಂತಿ ಎಲ್ಲವೂ ಊಹಾಪೋಹ. ಆ ರೀತಿಯ ಯಾವುದೇ ಚರ್ಚೆ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರೇ 5 ವರ್ಷ ಕಂಪ್ಲೀಟ್ ಮಾಡ್ತಾರೆ ಅಂತಾ ಎಂಎಲ್‌ಸಿ ಯತೀಂದ್ರ ಹೇಳಿದ್ದಾರೆ.

