ಸಹಕಾರಿ ರಂಗದ ಕೆಎಂಎಫ್ ಅಧ್ಯಕ್ಷ ಹುದ್ದೆ ಭಾರಿ ಮಹತ್ವ ಪಡೆದುಕೊಂಡಿದೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಭರ್ಜರಿ ಜಟಾಪಟಿಗೂ ವೇದಿಕೆ ಸೃಷ್ಟಿಯಾಗಿದೆ. 24 ಸಾವಿರ ಕೋಟಿ ರೂ. ವಹಿವಾಟು ನಡೆಸುವ ಕೆಎಂಎಫ್ ಅಧ್ಯಕ್ಷಗಾದಿ ಪ್ರತಿಷ್ಟಿತವಾದುದಾಗಿದ್ದು, ಹೀಗಾಗಿ ಪೈಪೋಟಿ ಸಹಜ. ಇದು ಕಾಂಗ್ರೆಸ್‌ನೊಳಗೆ ಬಣ ರಾಜಕೀಯಕ್ಕೂ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಬಣದಲ್ಲಿರುವ ರಾಘವೇಂದ್ರ ಹಿಟ್ನಾಳ್ ಅವರನ್ನು ಅಧ್ಯಕ್ಷ ಹುದ್ದೆಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಕಸರತ್ತು ನಡೆಯುತ್ತಿದೆ. ಮತ್ತೊಂದೆಡೆ ಮಾಜಿ ಸಂಸದ ಡಿ.ಕೆ. ಸುರೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗ ತಂತ್ರಗಾರಿಕೆ ಹೆಣೆಯುತ್ತಿದೆ. ಇನ್ನೂಂದೆಡೆ, ಕಳೆದ ಬಾರಿ ಕೊಟ್ಟ ಮಾತಿನಂತೆ ನನಗೆ ಅಧ್ಯಕ್ಷ ಹುದ್ದೆ ನೀಡಬೇಕು ಎಂದು ಮಾಲೂರು ಶಾಸಕ ನಂಜೇಗೌಡ ಪಟ್ಟು ಹಿಡಿದು ಕುಳಿತಿದ್ದಾರೆ.
ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾನಾಯಕ್, ಇನ್ನೊಂದು ಅವಧಿಗೆ ಅಧ್ಯಕ್ಷರಾಗಲು ಸಿಎಂ ಬಳಿ ಅಲವತ್ತುಕೊಂಡಿದ್ದಾರೆ. ಕೆಎಂಎಫ್ ಅಧುಕ್ಷ ಹುದ್ದೆ ನಿರ್ಣಯ ವಿಚಾರ ಈಗ ಮುಖ್ಯಮಂತ್ರಿಗಳ ಹಂತದಲ್ಲಿಯೇ ಉಳಿದಿಲ್ಲ. ಹೈಕಮಾಂಡ್ ಅಂಗಳಕ್ಕೂ ಈ ವಿಷಯ ತಲುಪಿದೆ. ಹಾಗಾಗಿ ಮುಂದೇನು ಎನ್ನುವುದು ಕಗ್ಗಂಟಾಗಿದೆ. ಸಿಎಂ, ಡಿಸಿಎಂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷರ ಆಯ್ಕೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಹೈಕಮಾಂಡ್ ಮುಂದಾಗಲಿದೆ.
ಇನ್ನು ಚುನಾವಣೆ ನಡೆಯಬೇಕಾದರೆ, 16 ಸಹಕಾರಿ ಹಾಲು ಒಕ್ಕೂಟಗಳಿಗೂ ಎಲೆಕ್ಷನ್ ಆಗಬೇಕು. ಈಗಾಗಲೇ 25 ಒಕ್ಕೂಟಗಳಿಗೆ ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಆದರೆ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಚುನಾವಣೆ ನಡೆಯದಿರವುದು ವಿಳಂಬಕ್ಕೆ ಕಾರಣವಾಗಿದೆ. ಕೋಲಾರ ಹಾಲು ಒಕ್ಕೂಟದಿಂದ ವಿಭಜನೆಗೊಂಡಿರುವ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ವರ್ಷ ತುಂಬಿಲ್ಲ. ಆ ಕಾರಣ ಒಕ್ಕೂಟವನ್ನು ಬಿಟ್ಟು ಚುನಾವಣೆ ನಡೆಸಬೇಕೆಂದು ವಾದಿಸಲಾಗಿತ್ತು. ಮತ್ತೊಂದೆಡೆ ಈ ಒಕ್ಕೂಟವನ್ನು ಒಳಗೊಂಡೇ ಚುನಾವಣೆ ವಿಳಂಬವಾಗಿತ್ತು. ಈಗ ಚಿಕ್ಕಬಳ್ಳಾಪುರ ಒಕ್ಕೂಟಕ್ಕೂ ವರ್ಷ ತುಂಬಿದೆ. ಇನ್ನು ಮುಂದೆ ಆ ರೀತಿ ತಾಂತ್ರಿಕ ಸಮಸ್ಯೆ ಇರುವುದಿಲ್ಲ ಎನ್ನುವ ವಿವರಣೆಯನ್ನು ಕೆಎಂಎಫ್ ಮತ್ತುಸಹಕಾರಿ ಇಲಾಖೆ ಅಧಿಕಾರಿಗಳು ಸಿಎಂಗೆ ವಿವರಿಸಿದ್ದಾರೆ.
ಕೆಎಂಎಫ್ ಅಧಕ್ಷ ಭೀಮಾನಾಯ್ಕ್ ಅವಧಿ ಮುಗಿದ ಬೆನ್ನಲ್ಲಿಯೇ ಜೂನ್ 2 ರಂದು ಸರ್ಕಾರ KMFಗೆ ಆಡಳಿತಾಧಿಕಾರಿ ನೇಮಿಸಿದೆ. ಇದಾಗಿ 2 ತಿಂಗಳು ಕಳೆದರೂ ಚುನಾವಣೆ ನಿಗದಿಯಾಗಿಲ್ಲ. ಸಹಕಾರಿ ಸಂಸ್ಥೆಗೆ ಸುದೀರ್ಘ ಅವಧಿ ಆಡಳಿತಾಧಿಕಾರಿ ನೇಮಕ ಮಾಡುವುದು ಸರಿಯಲ್ಲ ಎನ್ನುವುದನ್ನು, ಹಲವು ಒಕ್ಕೂಟಗಳು ಮುಖ್ಯಮಂತ್ರಿಗಳಿಗೆ ತಿಳಿಸಿದ್ದು, ಶೀಘ್ರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




