ಕೊಬ್ಬರಿ ಬೆಲೆ ಕುಸಿತ ಅನ್ನದಾತ ಕಂಗಾಲು – ಇಳಿಕೆಯತ್ತ ಸಾಗಿದ ಕೊಬ್ಬರಿ ದರ!

ಇತ್ತೀಚಿನ ಕೆಲ ವಾರಗಳಿಂದ, ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಧಾರಣೆ ನಿರಂತರವಾಗಿ ಇಳಿಕೆಯತ್ತ ಸಾಗುತ್ತಿದ್ದು, ಇದರಿಂದ ರೈತರ ಆತಂಕ ಹೆಚ್ಚಾಗಿದೆ. ಉಂಡೆ ಕೊಬ್ಬರಿ ಬೆಲೆ ಏರಿಕೆಯಿಂದಾಗಿ, ಉತ್ತರ ಭಾರತದ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿದೆ.

ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ಗರಿಷ್ಠ ದರ, ಕ್ವಿಂಟಲ್ ₹26,500ಕ್ಕೆ ಇಳಿಕೆಯಾಗಿದೆ. ಕನಿಷ್ಠ ₹24,000, ಮಾದರಿ ₹25,500ಕ್ಕೆ ಮಾರಾಟವಾಗಿದೆ. ಮಾರುಕಟ್ಟೆಗೆ 1,816 ಕ್ವಿಂಟಲ್ ಅಂದ್ರೆ 4,224 ಚೀಲ ಆವಕವಾಗಿತ್ತು.

ಒಂದು ವಾರದ ಅಂತರದಲ್ಲಿ ಕ್ವಿಂಟಲ್‌ಗೆ 1,606, ಸೋಮವಾರದ ಹರಾಜಿನಿಂದ, ಗುರುವಾರ ಹರಾಜಿನ ಹೊತ್ತಿಗೆ ₹1 ಸಾವಿರ ಕಡಿಮೆಯಾಗಿದೆ. ಒಂದು ತಿಂಗಳ ಅಂತರದಲ್ಲಿ ಕ್ವಿಂಟಲ್‌ಗೆ ₹5 ಸಾವಿರ ಕುಸಿತ ಕಂಡಂತಾಗಿದೆ.

ಜೂನ್ ತಿಂಗಳ ಕೊನೆವರೆಗೂ ಬೆಲೆ ನಿರಂತರವಾಗಿ ಏರಿಕೆಯಾಗುತ್ತಾ ಹೋದವು. ಕ್ವಿಂಟಲ್ ಗೆ ₹31,606 ಎಂಬ ದಾಖಲೆ ಮಟ್ಟವನ್ನು ಸಹ ತಲುಪಿತ್ತು. ಅಂದು ಇಳಿಕೆ ನಿರೀಕ್ಷೆ ಇರಲಿಲ್ಲ. ಜುಲೈ ತಿಂಗಳ ಮಧ್ಯ ₹28,000ರಿಂದ ₹30,000ರವರೆಗೆ ಮಾರಾಟವಾಗುತ್ತಿತ್ತು. ₹28 ಸಾವಿರದ ಆಸುಪಾಸಿನಲ್ಲಿ ಸ್ಥಿರವಾಗಬಹುದು ಎಂದು ವರ್ತಕರು, ಖರೀದಿದಾರರು, ದಲ್ಲಾಳಿಗಳು, ರೈತರು ಭಾವಿಸಿದ್ದರು.

ಆದರೆ ಈ ನಿರೀಕ್ಷೆ ಜುಲೈನಲ್ಲಿ ಮಾರುಕಟ್ಟೆಯ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿತು. ಕೊಬ್ಬರಿ ಉಂಡೆಗಳ ಬೆಲೆ, ಆಗಸ್ಟ್ ಆರಂಭದಷ್ಟರಲ್ಲೂ ಚೇತರಿಕೆಯ ಲಕ್ಷಣ ಕಾಣಿಸಲಿಲ್ಲ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಹೀಗೆ ಇಳಿಕೆಯಾದ ಮೇಲೆ, ಮುಂದಿನ ದಿನಗಳಲ್ಲಿ ಬೆಲೆ ₹25,000 ಸಮೀಪದಲ್ಲಿ ಸ್ಥಿರವಾಗಬಹುದು. ಇದಕ್ಕಿಂತ ಇಳಿಕೆಯಾಗುವ ಸಾಧ್ಯತೆಗಳು ಕಡಿಮೆ ಅಂತ ಹೇಳಲಾಗುತ್ತಿದೆ.

ಕೊಬ್ಬರಿ ದುಬಾರಿಯಾದ ಕಾರಣಕ್ಕೆ, ತಮಿಳುನಾಡು, ಕೇರಳದಲ್ಲಿ ಕಡಿಮೆ ಬೆಲೆಗೆ ಸಿಗುವ ತೆಂಗಿನ ಕಾಯಿಗಳನ್ನೇ ಖರೀದಿಸಿ ಅದರ ಮೂಲಕವೇ ತೆಂಗಿನ ಎಣ್ಣೆ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದಾಗಿ ಎಣ್ಣೆ ಉತ್ಪಾದನೆಗೆ ನಮ್ಮ ರಾಜ್ಯದ ಕೊಬ್ಬರಿ ಬಳಕೆ ಕಡಿಮೆಯಾಗಿದೆ. ಹಾಗಾಗಿ ಬೆಲೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

About The Author