ಕರ್ನಾಟಕ ಗುತ್ತಿಗೆದಾರರ ಸಂಘಟನೆ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಹೊರಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ದರಗಳು ದ್ವಿಗುಣಗೊಂಡಿದ್ದು, ಬಾಕಿ ಬಿಲ್‌ಗಳು ಬಿಡುಗಡೆ ಆಗದೇ 33,000 ಕೋಟಿ ರೂ. ಬಾಕಿ ಉಳಿದಿದೆ ಎಂದು ಸಂಘಟನೆ ಆರೋಪಿಸಿದೆ.
ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಪತ್ರದಲ್ಲಿ, ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ರೀತಿಯ ಲಾಭವಾಗಿಲ್ಲ. ಹಲವಾರು ಸುತ್ತಿನ ಸಭೆಗಳು ನಡೆದರೂ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. ನಿಮ್ಮ ಭರವಸೆಯಿಂದ ತಾಳ್ಮೆಯಿಂದ ಕಾಯುತ್ತಿದ್ದೇವೆ. ಆದರೆ ಇನ್ನೂ ಬಾಕಿ ಸಮಸ್ಯೆಗಳು ಬಗೆಹರಿಯದೆ ಹಾಗೆ ಇವೆ ಎಂದು ತಿಳಿಸಿದೆ.
ಸಂಘದ ಪ್ರಕಾರ, ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಕೆಲವು ಇಲಾಖೆಗಳಲ್ಲಿನ ಕಮಿಷನ್ ದರಗಳು ದುಪ್ಪಟ್ಟಾಗಿವೆ. ಗುತ್ತಿಗೆದಾರರ ಮೂಲಕ ಕಾರ್ಯನಿರ್ವಹಿಸುವ ಸರ್ಕಾರಿ ಇಲಾಖೆಗಳು ಬಾಕಿ ಇರುವ ಬಿಲ್‌ಗಳನ್ನು ಬಿಡುಗಡೆ ಮಾಡಿಲ್ಲ. ಅಧಿಕಾರಿಗಳೊಂದಿಗೆ ಹಲವು ಸಭೆಗಳು ನಡೆದರೂ ಯಾವುದೇ ಸ್ಪಷ್ಟ ಪರಿಹಾರ ದೊರಕಿಲ್ಲ ಎಂದು ಆರೋಪಿಸಿದೆ.
ಗುತ್ತಿಗೆದಾರರ ಸಂಘದ ಪತ್ರ ಉಲ್ಲೇಖಿಸಿ ಪ್ರತಿಪಕ್ಷ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ 80% ಕಮಿಷನ್ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಈಗ ತಾನೇ ಭ್ರಷ್ಟಾಚಾರದ ಬಲೆಗೆ ಸಿಲುಕಿದೆ. ಗುತ್ತಿಗೆದಾರರ ಪತ್ರವೇ ಇದಕ್ಕೆ ಸಾಕ್ಷಿ ಎಂದು ಆರ್. ಅಶೋಕ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ