ಹುಬ್ಬಳ್ಳಿ: ರೈತರು ಮತ್ತು ಬ್ಯಾಂಕಿನವರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ರಾಜಿ ಸಂಧಾನ ಕಾರ್ಯಕ್ರಮ ಸಹಕಾರಿಯಾಗಿದೆ. ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿನ್ನಣ್ಣವರ ಆರ್. ಎಸ್. ಹೇಳಿದರು.
ಇಂದು ನೂತನ ನ್ಯಾಯಾಲಯಗಳ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ವಾರ್ತಾ ಇಲಾಖೆ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಪೂರ್ವ ವ್ಯಾಜ್ಯ ಪ್ರಕರಣಗಳ ರಾಜೀ ಸಂಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಣ್ಣ ಪುಟ್ಟ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದು. ನ್ಯಾಯಾಲಯಕ್ಕೆ ಬರುವ ಮುನ್ನ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅವಕಾಶವಿರುತ್ತದೆ. ರಾಜಿ ಸಂಧಾನದ ಮೂಲಕ ಸುಖಿ ಜೀವನ ಸಾಗಿಸಬಹುದು. ಡೈವರ್ಸ್, ಕುಟುಂಬ ಕಲಹ ಪ್ರಕರಣಗಳಂತೆ ಇತರೆ ಪ್ರಕರಣಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಪ್ರಾಮಾಣಿಕ ರೈತರು ಸಾಲಕ್ಕೆ ಅಂಜುವುದಿಲ್ಲ. ರೈತರಿಗೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಮಯಾವಕಾಶ ನೀಡಬೇಕಾಗಿರುತ್ತದೆ. ಸೆಪ್ಟೆಂಬರ್ 9 ರಂದು ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ದಿವಾಣಿ ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ಮಾತನಾಡಿ, ರಾಜಿ ಸಂಧಾನದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಯಾವುದೇ ಕಷ್ಟಗಳನ್ನು ಅನುಭವಿಸದೇ ಸಾಲ ಮರುಪಾವತಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಒಂದೇ ದಿನದಲ್ಲಿ 3 ಕೋಟಿ ಮೊತ್ತದ 72 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ನ್ಯಾಯಾಲಯದ ವತಿಯಿಂದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅದಾಲತ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕರಾದ ರಮಾನಂದ ಟಿ.ವಿ. ಮಾತನಾಡಿ, ಹುಬ್ಬಳ್ಳಿಯ ಸುತ್ತಮುತ್ತಲಿನಲ್ಲಿ 11 ಶಾಖೆಗಳಿವೆ. 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿಯಿದ್ದು, ಅವುಗಳನ್ನು ಗ್ರಾಹಕರು ಬಗೆಹರಿಸಿಕೊಳ್ಳಬೇಕು. ಸಾಲವನ್ನು ಕಾಲಮಿತಿಯೊಳಗೆ ಕಟ್ಟಲು ಆಗದಿದ್ದಾಗ ಮರು ಕಾಲಾವಕಾಶ ನೀಡಲಾಗುತ್ತದೆ. ಮಾನವೀಯತೆ ದೃಷ್ಟಿಕೋನದಿಂದ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತದೆ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕನ ಸಹಾಯಕ ಮುಖ್ಯ ವ್ಯವಸ್ಥಾಪಕರಾದ ರಮೇಶ ಮಾತನಾಡಿ, ಬ್ಯಾಂಕ್ ಸಾಲ ಮರುಪಾವತಿಗೆ 3 ರಿಂದ 5 ತಿಂಗಳ ಕಾಲಾವಕಾಶ ನೀಡಲಾಗುವುದು. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಈ ತರಹದ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರು, ಭಾರತೀಯ ಸ್ಟೇಟ್ ಬ್ಯಾಂಕ್ ಸಿಬ್ಬಂದಿ, ಯುನಿಯನ್ ಬ್ಯಾಂಕ್ ಸಿಬ್ಬಂದಿ, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.
Builders: ಪ್ಲಾಟ್ ಮಾರಾಟ ಮಾಡಿದ್ದರೂ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್..!