Wednesday, November 26, 2025

Latest Posts

ಕಾಂಗ್ರೆಸ್‌ CM ಕುರ್ಚಿ ಕಿತ್ತಾಟ – ರಾಹುಲ್‌ ಖರ್ಗೆ ಭೇಟಿ !

- Advertisement -

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ವಿವಾದ ತೀವ್ರಗೊಂಡಿದ್ದು, ಬೆಂಗಳೂರಿನಿಂದ ದೆಹಲಿವರೆಗೆ ತುರ್ತು ಸಭೆಗಳು ನಡೆಯುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರಿನ ನಿವಾಸವೇ ಈ ರಾಜಕೀಯ ಚರ್ಚೆಗಳ ಕೇಂದ್ರವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎರಡೂ ಬಣಗಳ ನಾಯಕರು ದೆಹಲಿ ಸಂಪರ್ಕದಲ್ಲಿದ್ದಾಗ, ಬಿಕ್ಕಟ್ಟನ್ನು ಬಗೆಹರಿಸಲು ಖರ್ಗೆ ಸ್ವತಃ ಬೆಂಗಳೂರಿಗೆ ಬಂದರು. ಆದರೆ ಸಮಸ್ಯೆ ಹೈಕಮಾಂಡ್ ಮಟ್ಟಕ್ಕೆ ತಲುಪಿರುವುದರಿಂದ, ‘ನನ್ನ ಕೈಯಲ್ಲಿ ಏನೂ ಇಲ್ಲ’ ಎಂದು ಖರ್ಗೆ ಸ್ಪಷ್ಟಪಡಿಸಿದರೆಂಬ ಮಾಹಿತಿ ದೊರಕಿದೆ.

ಖರ್ಗೆ ನಿವಾಸಕ್ಕೆ ಸಚಿವರು ನಿರಂತರವಾಗಿ ಭೇಟಿ ನೀಡಿ ಅಹವಾಲು ಸಲ್ಲಿಸುತ್ತಿದ್ದಾರೆ. ಕೆ.ಜೆ. ಜಾರ್ಜ್, ಹೆಚ್‌.ಸಿ. ಮಹದೇವಪ್ಪ ಮತ್ತು ವೆಂಕಟೇಶ್ ಇವರೂ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ನಂತರ ಸಿಎಂ ಸಿದ್ದರಾಮಯ್ಯ ಅವರ ಮನೆಗೂ ತೆರಳಿ ಚರ್ಚಿಸಿದರು. ಆದರೆ ಮಾತುಕತೆಯ ವಿಷಯ ಬಹಿರಂಗವಾಗಿಲ್ಲ.

ಕಳೆದ ಎರಡು ದಿನಗಳಿಂದ ಖರ್ಗೆ ಅವರು ಸಿಎಂ, ಸಚಿವರು, ಶಾಸಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಆಯೋಜಿಸಿದ ಡಿನ್ನರ್ ಮೀಟಿಂಗ್‌ನಲ್ಲಿ ನಡೆದ ಚರ್ಚೆಗಳ ವಿವರವನ್ನು ಕೂಡಾ ಅವರಿಗೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಖರ್ಗೆ ಅವರನ್ನು ಭೇಟಿ ಮಾಡಿ, ಪಕ್ಷದ ಒಳಕಳಹ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆತಂಕವನ್ನು ಹಂಚಿಕೊಂಡು, ಡಿಕೆ ಬಣದಿಂದ ಸಹಿ ಸಂಗ್ರಹ ನಡೆಯುತ್ತಿರುವ ವಿಚಾರದಲ್ಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಬಣ ಮತ್ತು ಡಿಕೆ ಬಣ—ಎರಡು ಗುಂಪುಗಳೂ ಖರ್ಗೆ ಅವರನ್ನು ಸಂಪರ್ಕಿಸಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ಭೇಟಿ ನೀಡಿದ್ದಾರೆ. ಡಿಕೆಶಿ ಇನ್ನೂ ಭೇಟಿ ಮಾಡದಿದ್ದರೂ, ‘ನಮ್ಮ ಮನೆ ಕೇವಲ ನೂರು ಮೀಟರ್ ಅಂತರದಲ್ಲಿ’ ಎಂಬ ಖರ್ಗೆ ಅವರ ಹೇಳಿಕೆ ಕುತೂಹಲ ಮೂಡಿಸಿದೆ. ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಮರಳುವ ನಿರೀಕ್ಷೆಯಿದ್ದು, ಖರ್ಗೆ ಮಂಗಳವಾರ ದೆಹಲಿಗೆ ತೆರಳಿ ಸಂಪೂರ್ಣ ವರದಿ ನೀಡಲು ಸಿದ್ಧರಾಗಿದ್ದಾರೆ. ರಾಜ್ಯ ನಾಯಕರು ಈ ಗೊಂದಲಕ್ಕೆ ಅಂತಿಮ ತೀರ್ಪು ರಾಹುಲ್ ಗಾಂಧಿಯವರಿಂದಲೇ ಬರಲಿದೆ ಎಂದು ನಂಬುತ್ತಿದ್ದಾರೆ.

ಭಾನುವಾರ ಸಚಿವ ಜಾರ್ಜ್, ಖರ್ಗೆ ಮತ್ತು ನಂತರ ಸಿಎಂ ಅವರನ್ನು ಭೇಟಿ ಮಾಡಿದ ಬಳಿಕ, ಡಿಕೆಶಿ ಜಾರ್ಜ್ ಅವರ ಮನೆಗೆ ತೆರಳಿ ರಹಸ್ಯ ಚರ್ಚೆ ನಡೆಸಿರುವುದು ಮತ್ತಷ್ಟು ರಾಜಕೀಯ ರಸಿಕತೆ ಹೆಚ್ಚಿಸಿದೆ. ಜಾರ್ಜ್ ಹೈಕಮಾಂಡ್‌ಗೆ ಹತ್ತಿರವಾಗಿರುವುದರಿಂದ ಈ ಭೇಟಿ ವಿಶೇಷದ ಗಮನ ಸೆಳೆದಿದೆ. ಒಟ್ಟಿನಲ್ಲಿ—ಕಾಂಗ್ರೆಸ್‌ನ ಅಂತರ ಕಲಹಕ್ಕೆ ತೆರೆ ಬೀಳಲು, ಎಲ್ಲರ ದೃಷ್ಟಿ ಈಗ ದೆಹಲಿಯಲ್ಲಿ ಖರ್ಗೆ–ರಾಹುಲ್ ಭೇಟಿಯತ್ತ ನೆಟ್ಟಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss