ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದ್ದರು. ಆ ನಂತರ, ಆರ್‌ಎಸ್‌ಎಸ್ ಸೇರಿದಂತೆ ಇತರೆ ಸಂಘಟನೆಗಳ ಸಾರ್ವಜನಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಸರ್ಕಾರವು ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬರಿಗೆ ಮಹತ್ವದ ಹುದ್ದೆ ನೀಡಿರುವುದು ಕಾಂಗ್ರೆಸ್ ಶಿಬಿರದಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.
ತಿಪಟೂರಿನ ಆರ್‌ಎಸ್‌ಎಸ್ ಸದಸ್ಯ ಡಾ. ಶ್ರೀಧರ್ ಕುಮಾರ್ ಅವರನ್ನು ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಸದಸ್ಯರಾಗಿ ಸರ್ಕಾರ ನೇಮಕ ಮಾಡಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಿದ ಬಳಿಕ ಈ ಇಲಾಖೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಶದಲ್ಲಿದ್ದು, ಅವರೇ ಈ ನೇಮಕಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಈ ನೇಮಕದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಸ್ಟ್‌ನ ಮಹಾಪೋಷಕರಾಗಿರುವ ಸಿದ್ದರಾಮಯ್ಯ ಅವರು ಈ ನೇಮಕವನ್ನು ತಕ್ಷಣ ಹಿಂಪಡೆಯಬೇಕೆಂದು ಪಕ್ಷದ ಕೆಲ ನಾಯಕರು ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ, ರಾಜ್ಯದ ಕೆಲ ಸರ್ಕಾರಿ ಹಾಗೂ ಗುತ್ತಿಗೆ ನೌಕರರು ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡುವ ಕ್ರಮ ಕೈಗೊಳ್ಳಲಾಗಿತ್ತು.
ಜೊತೆಗೆ, ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಸಂಘಟನೆಗಳ ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಹೊಸ ನಿಯಮ ಹೇರಿತ್ತು. ಪ್ರಿಯಾಂಕ್ ಖರ್ಗೆ ಅವರ ಪತ್ರದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದರಿಂದ, ಕಾಂಗ್ರೆಸ್ ಸರ್ಕಾರವು ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ಪರೋಕ್ಷ ಅಂಕುಶ ಹೇರಿದೆ ಎಂಬ ಆರೋಪ ಕೇಳಿಬಂದಿತ್ತು.
ಇದೀಗ ಅದೇ ಸರ್ಕಾರದಿಂದ ಆರ್‌ಎಸ್‌ಎಸ್ ಕಾರ್ಯಕರ್ತನಿಗೆ ಹುದ್ದೆ ನೀಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ರಾಜಕೀಯ ವೀಕ್ಷಕರ ಅಭಿಪ್ರಾಯದಂತೆ, ಈ ಬೆಳವಣಿಗೆ ಕಾಂಗ್ರೆಸ್‌ನ ಒಳರಾಜಕೀಯದಲ್ಲಿಯೂ ತೀವ್ರತೆ ಉಂಟುಮಾಡುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ

