ಆ ದಿನಕ್ಕೆ ಕಾಯುತ್ತಿದ್ದಾರೆ ಡಿಕೆಶಿ!

ನವೆಂಬರ್‌ 20ಕ್ಕೆ ಬೆಂಗಳೂರಿಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಆಗಮಿಸುತ್ತಿದ್ದಾರೆ. ರಾಹುಲ್ ಗಾಂಧಿ ಬಂದಾಗ ಪಕ್ಷ ನಿಷ್ಠೆ ಮತ್ತು ಸಂಘಟನಾ ಸಾಮರ್ಥ್ಯ ಪ್ರದರ್ಶಿಸಲು, ಡಿ.ಕೆ. ಶಿವಕುಮಾರ್‌ ಸಜ್ಜಾಗಿದ್ದಾರೆ. ರಾಜ್ಯಾದ್ಯಂತ 100 ಕಾಂಗ್ರೆಸ್ ಭವನಗಳಿಗೆ ಶಂಕು ಸ್ಥಾಪನೆ ಮಾಡುವುದರ ಮೂಲಕ, ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಪಕ್ಷಕ್ಕಾಗಿ ಹಲವು ಸಂದರ್ಭಗಳಲ್ಲಿ ಸವಾಲು ಎದುರಿಸಿರುವ ಡಿಕೆಶಿ, ಸಿಎಂ ಸ್ಥಾನ ವಿಚಾರವಾಗಿ ಹೈಕಮಾಂಡ್ ಸಾಥ್ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಸಿಎಂ ಸ್ಥಾನ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಹೇಳಿದ್ದರು.

ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೂ ಉತ್ತಮ ಅಭಿಪ್ರಾಯ ಇದೆ. ಪಕ್ಷಕ್ಕೆ ಸಂಕಷ್ಟ ಎದುರಾಗಿದ್ದ ಸಂದರ್ಭದಲ್ಲಿ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದರು. ಇದರಿಂದಾಗಿ ಕಷ್ಟ ನಷ್ಟಗಳನ್ನೂ ಎದುರಿಸಿದ್ದರು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ ಎಂಬ ವಿಶ್ವಾಸದಲ್ಲಿ ಡಿಕೆಶಿ ಇದ್ದಾರೆ.

ಈ ನಡುವೆ ನವೆಂಬರ್ 20ರಂದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಅವರು, ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್‌ ಪಕ್ಷದ ಜಾಗದಲ್ಲಿ, ಹೈಬ್ರಿಡ್‌ ಸ್ವರೂಪದ ಬೃಹತ್‌ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ, ಗಾಂಧಿ ಭಾರತ-100 ಹೆಸರಿನಲ್ಲಿ ರಾಜ್ಯಾದ್ಯಂತ 100 ಕಾಂಗ್ರೆಸ್‌ ಕಚೇರಿಗಳ ನಿರ್ಮಾಣಕ್ಕೂ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಕಚೇರಿಗೆ ಹೊಸ ಸ್ವರೂಪ ನೀಡಿದ್ದರು. ಕೆಪಿಸಿಸಿ ಕಚೇರಿಯ ಹಿಂಭಾಗದಲ್ಲಿ ಭಾರತ್ ಜೋಡೋ ಭವನ ಪೂರ್ಣಗೊಳಿಸಿ ಉದ್ಘಾಟನೆ ಮಾಡಿಸಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಜೆಡಿಎಸ್ ಕಚೇರಿಯಾಗಿದ್ದು ಬಳಿಕ ಕಾಂಗ್ರೆಸ್‌ಗೆ ಧಕ್ಕಿದ್ದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಟ್ಟಡವನ್ನು, ನೆಪಸಮಗೊಳಿಸಿ ಅಲ್ಲಿ ಹೈಬ್ರೀಡ್ ಕಚೇರಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಕೆಲವು ಕಡೆಗಳಲ್ಲಿ ಜಿಲ್ಲಾ ಮಟ್ಟದ ನಾಯಕರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲವೆಂಬ ಆರೋಪವೂ ಇದೆ. ಆದರೆ ನೂರು ಕಟ್ಟಡಗಳ ನಿರ್ಮಾಣವನ್ನು ಡಿಕೆಶಿ ಸವಾಲಾಗಿ ತೆಗೆದುಕೊಂಡಿದ್ದಾರೆ.

About The Author