ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ಅವರನ್ನು ವಜಾ ಮಾಡಿದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಮತ್ತೊಂದು ಬಿಗ್ ಡಿಸಿಷನ್ ಕೈಗೊಂಡಿದೆ. ಕಾಂಗ್ರೆಸ್ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಮಲಯಾಳಂನ ಖ್ಯಾತ ನಟಿ ಮತ್ತು ಮಾಜಿ ಪತ್ರಕರ್ತೆಯು ಆಗಿದ್ದ ರಿನಿ ಜಾರ್ಜ್ ಅವರಿಗೆ, ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅಶ್ಲೀಲ ಮೇಸೆಜ್ ಕಳುಹಿಸಿದ್ರು ಎನ್ನುವ ಆರೋಪದ ಮೇಲೆ ಕೆಲವು ದಿನ ಹಿಂದಷ್ಟೆ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದೀಗ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದ ಆರೋಪದ ಹಿನ್ನಲೆಯಲ್ಲಿ ಶಾಸಕ ರಾಹುಲ್ ಮಮ್ ಕೂಟತಿಲ್ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಂಡಿದೆ. ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಆರು ತಿಂಗಳ ಕಾಲ ಅಮಾನತು ಮಾಡಲಾಗಿದ್ದು ಆದಾಗ್ಯೂ, ಪಕ್ಷವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿಲ್ಲ.
ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಮಮ್ ಕೂಟತಿಲ್ ಅವರು ಶಾಸಕ ಹುದ್ದೆಯನ್ನು ತ್ಯಜಿಸುವ ಬಗ್ಗೆ ಚರ್ಚೆಗಳ ನಡುವೆ ಪಕ್ಷದ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ, ರಾಹುಲ್ ಮಮ್ ಕೂಟತಿಲ್ ಪಕ್ಷದ ಅಥವಾ ಸಂಸದೀಯ ಪಕ್ಷದ ಸಭೆಯಲ್ಲಿ ಸದಸ್ಯರಾಗಿರುವುದಿಲ್ಲ. ಇನ್ನು ತಕ್ಷಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಉಪಚುನಾವಣೆ ನಡೆಯಲಿದೆ ಎಂಬುದು ಪಕ್ಷದ ನಿಲುವು ಎಂದು ಸೂಚಿಸಲಾಗಿದೆ.
ಇದರ ಮಧ್ಯೆ, ರಾಹುಲ್ ಶಾಸಕರಾಗಿ ಮುಂದುವರಿಯುವುದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ವಿ.ಕೆ ಸನೋಜ್ ಹೇಳಿದ್ದಾರೆ. ರಾಹುಲ್ ಮಮ್ ಕೂಟತಿಲ್ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಪಕ್ಷವು ತನಿಖೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹಿರಿಯ ನಾಯಕರು ಈ ಹಿಂದೆ ಹೇಳಿದ್ದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ